ಶತಾಯುಷಿ ಸ್ವಾತಂತ್ರ ್ಯ ಹೋರಾಟಗಾರ ಮದನ ಮಾಸ್ಟರಗೆ ಹುಟ್ಟೂರ ಸಮ್ಮಾನ

ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಅವರು ಮದನ ಮಾಸ್ಟರನ್ನು ಗೌರವಿಸುತ್ತಿರವುದು

ಕಾಸರಗೋಡು : ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಕ, ಪ್ರಗತಿಪರ ಕೃಷಿಕ, ಕಮ್ಯೂನಿಸ್ಟ್ ಮುಖಂಡರಾದ ಪೆರ್ಲ ಕೆ ಪಿ ಮದನ ಮಾಸ್ಟರ್ ಅವರು ತಮ್ಮ ಜೀವನದ ನೂರನೇ ವರ್ಷಕ್ಕೆ ಕಾಲಿರಿಸಿದ ಸಂದರ್ಭದಲ್ಲಿ ಸರ್ವ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಅವರನ್ನು ಗೌರವಿಸಿ ಶುಭಹಾರೈಸಲಾಯಿತು.

“ಮದನ ಮಾಸ್ಟರ್ ಅವರು ಯಾವುದೇ ರೀತಿಯ ಸಹಾಯ ಮಾಡುವಾಗ ಅವರ ರಾಜಕೀಯ ಪಕ್ಷ, ಜಾತಿ, ಧರ್ಮಗಳ ಗಮನಕ್ಕೆ ತೆಗದುಕೊಳ್ಳದೆ ಎಲ್ಲರನ್ನೂ ಸಮಾನರಾಗಿ ನೋಡುವ ಆದರ್ಶ ಗುಣ ಅವರಲ್ಲಿದೆ. ನೂರು ವರ್ಷಗಳ ಕಾಲ ಉತ್ತಮ ಆರೋಗ್ಯದಿಂದ ಬದುಕಿರುವರು ಇನ್ನು ಕೂಡ ಹೆಚ್ಚು ವರ್ಷ ಬಾಳಲಿ” ಎಂದು ಪುತ್ತೂರು ಶಾಸಕಿ, ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಪೆರ್ಲ ಶಂಕರ ಸದನದಲ್ಲಿ ನಡೆದ ಮಾಸ್ಟರ್ ಅವರನ್ನು ಸತ್ಕರಿಸಿ ಮಾತನಾಡಿದರು.

“ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ಕಷ್ಟಸುಖಗಳಿಗೆ ಸ್ಪಂದಿಸಿದ, ಸಮಾಜದ ಎಲ್ಲ ವರ್ಗದವರಿಗೆ ಶಿಕ್ಷಣ, ಭೂಮಿಯ ಹಕ್ಕು ಸಹಿತ ಎಲ್ಲ ರೀತಿಯ ಸಹಾಯಹಸ್ತ ನೀಡುತ್ತಿದ್ದ ಮದನ ಮಾಸ್ಟರ್ ಅವರು ಸಮಾಜದಲ್ಲಿ ಅಜಾತಶತ್ರು. ತನಗಾಗಿ, ತನ್ನ ಕುಟುಂಬಕ್ಕಾಗಿ ಏನನ್ನೂ ಮಾಡದೆ ಸಮಸ್ತವನ್ನು ಜಾತಿ,ಧರ್ಮ, ರಾಜಕೀಯ ಪಕ್ಷದ ತಾರತಮ್ಯ ಇಲ್ಲದೆ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಿದವರು” ಎಂದು ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಸದಾನಂದ ಪೆರ್ಲ ಹೇಳಿದರು.

“ರಾಜಕೀಯ ಚಟುವಟಿಕೆ ಮೂಲಕ ಸಮಾಜ ಎಲ್ಲ ಸ್ತರದ ಜನರಿಗೆ, ಗ್ರಾಮೀಣ ಪ್ರದೇಶದ ರೈತಾಪಿ ಜನತೆಗಾಗಿ ಪರಿಶ್ರಮಪಟ್ಟವರು ಮದನ ಮಾಸ್ಟರ್” ಎಂದು ಮಾಜಿ ಶಾಸಕರು ಮತ್ತು ಸಿಪಿಐಎಂ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ ಪಿ ಸತೀಶ್ಚಂದ್ರನ್ ಹೇಳಿದರು.

“ಆರೋಗ್ಯವನ್ನು ಕಾಪಾಡಿಕೊಂಡು ನೂರು ವರ್ಷ ಬದುಕುವುದು ಕಡಿಮೆ ಸಾಧನೆಯಲ್ಲ. ತಮ್ಮ ಜೀವನವುದಕ್ಕೂ ಜನರಿಗಾಗಿ ಕೆಲಸ ಮಾಡಿದ ಮದನ ಮಾಸ್ಟರ್ ಅವರು ಉತ್ತಮ ಆಹಾರ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ” ಎಂದು ಮಂಜೇಶ್ವರ ಶಾಸಕರ ಅಬ್ದುಲ್ ರಝಾಕ್ ಹೇಳಿದರು.

“ಮದನ ಮಾಸ್ಟರ್ ಎಂದೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ವೈಯಕ್ತಿಕ ವಿಚರಗಳ ನಡುವೆ ತರುತ್ತಲೇ ಇರಲಿಲ್ಲ. ಸೈದ್ಧಾಂತಿಕ ಕಾರಣಕ್ಕಾಗಿ ಒಬ್ಬನನ್ನು ದೂರ ಇರಿಸುವ ಕ್ರಮ ಅವರಲ್ಲಿ ಇಲ್ಲ” ಎಂದು ಡಾ ಶ್ರೀಪತಿ ಕಜಂಪಾಡಿ ನುಡಿದರು.

“ರಾಜಿ ಪಂಚಾಯತಿಕೆ ಮೂಲಕ ಗ್ರಾಮೀಣ ಪ್ರದೇಶದ ಬಹಳಷ್ಟು ಕುಟುಂಬಗಳಿಗೆ ಸಹಾಯ ಮಾಡಿದ ಹಿರಿಯ ರಾಜಿ ಪಂಚಾಯಿತಿಗಾರರು ಇವರು” ಎಂದು ಬ್ಯಾರಿ ಅಕಾಡಮಿ ಸದಸ್ಯೆ ಅಯಿಶಾ ಪೆರ್ಲ ಅಭಿಪ್ರಾಯಪಟ್ಟರು.