ಕ್ರೈಸ್ತ ಧರ್ಮಾಧ್ಯಕ್ಷ ಗುರು ದೀಕ್ಷೆ ಪಡೆದು 50 ವರ್ಷ ; ಇಂದು ಸುವರ್ಣ ಮಹೋತ್ಸವ

ಪಿಯೂಸ್ ರೋಡ್ರಿಗಸ್ ಸುದ್ದಿಗಾರರೊಂದಿಗೆ ಮಾತನಾಡಿದರು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಎಲೋಶಿಯಸ್ ಪಾವ್ಲ್ ಡಿಸೋಜ ಅವರು ಗುರು ದೀಕ್ಷೆ ಪಡೆದು 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅವರ ಹುಟ್ಟೂರಾದ ಬಂಟ್ವಾಳದ ಅಗ್ರಾರ್ ಚರ್ಚಿನಲ್ಲಿ ಡಿ 4ರಂದು (ಇಂದು) ಸುವರ್ಣ ಮಹೋತ್ಸವ ಸಂಭ್ರಮವನ್ನು ಆಚರಿಸಲಾಗುವುದು ಎಂದು ಆಚರಣಾ ಸಮಿತಿಯ ಪ್ರಧಾನ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬೆಳಗ್ಗೆ 10ಗಂಟೆಗೆ ಧರ್ಮಾಧ್ಯಕ್ಷರ ನೇತೃತ್ವದಲ್ಲಿ ಮೂವರು ಬಿಷಪರು, ನೂರಾರು ಧರ್ಮಗುರುಗಳ ಹಾಗೂ ಸಾವಿರಾರು ಭಕ್ತಾಧಿಗಳ ಉಪಸ್ಥಿತಿಯಲ್ಲಿ ದಿವ್ಯ ಬಲಿ ಪೂಜೆ ನಡೆಯಲಿದ್ದು, ಬಳಿಕ 11:30ಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ” ಎಂದರು.

ಈ ಸಮಾರಂಭದಲ್ಲಿ ಉಡುಪಿ, ಬಳ್ಳಾರಿ, ಅಜ್ಮೀರ್ ಧರ್ಮಪ್ರಾಂತ್ಯದ ಬಿಷಪರುಗಳಾದ ಡಾ ಜೆರಾಲ್ಡ್ ಐಸಾಕ್ ಲೋಬೋ, ಡಾ ಹೆನ್ರಿ ಡಿಸೋಜ, ಡೆನ್ನೀಸ್ ಮೋರಸ್ ಪ್ರಭು, ಸಚಿವರುಗಳಾದ ಕೆ ಜೆ ಜಾರ್ಜ್, ಬಿ ರಮಾನಾಥ ರೈ, ಯು ಟಿ ಖಾದರ್, ಸಂಸದ ನಳಿನ್, ಆಸ್ಕರ್ ಫೆರ್ನಾಂಡಿಸ್, ಶಾಸಕರಾದ ಜೆ ಆರ್ ಲೋಬೊ, ಐವನ್ ಡಿಸೋಜ, ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

1941ರ ಜೂನ್ 20ರಂದು ಅಗ್ರಾರ್ ಹೆಕ್ಕೊಟ್ಟು ಎಂಬಲ್ಲಿ ಮಥಾಯಿಸ್ ಹಾಗೂ ಇಸಾಬೆಲ್ಲಾ ಡಿಸೋಜ ಅವರ 7 ಮಕ್ಕಳಲ್ಲಿ ಆರನೆಯವರಾಗಿ ಜನಿಸಿದ ಎಲೋಸಿಯಸ್ ಪಾವ್ಲ್ ಡಿಸೋಜ ಅವರು ಪ್ರಾಥಮಿಕ ಶಿಕ್ಷಣವನ್ನು ಅಗ್ರಾರ್ ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಬಂಟ್ವಾಳ ಎಸ್ ವಿ ಎಸ್ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದ್ದರು. 1966 ರ ಡಿ 3ರಂದು ಅಗ್ರಾರ್ ಚರ್ಚಿನಲ್ಲಿ ಗುರು ದೀಕ್ಷೆಯನ್ನು ಪಡೆದಿದ್ದರು ಎಂದ ಪಿಯೂಸ್, ದೇಶದ ತನ್ನ ಕಾರ್ಯ ವ್ಯಾಪ್ತಿಯಲ್ಲಿ ಅನೇಕ ಆಡಳಿತಾತ್ಮಕ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಹೆಗ್ಗಳಿಕೆಯನ್ನು ಪಡೆದಿದ್ದಾರೆ ಎಂದರು.

ಅವರು 20 ವರ್ಷಗಳ ಕಾಲ ಧರ್ಮಾಧ್ಯಕ್ಷರಾಗಿ ಸಾರ್ಥಕ ಸೇವೆ ಹಾಗೂ 75 ವರ್ಷಗಳ ಸಫಲ ಜೀವನ ನಡೆಸಿದ್ದಾರೆ. ಸಮಾಜದ ಸರ್ವ ಬಾಂಧವರಿಗೂ ನೀಡಿದ ಸೇವೆ ಹಾಗೂ ಕೊಡುಗೆಯನ್ನು ಸ್ಮರಿಸಿ ಹುಟ್ಟೂರಲ್ಲಿ ಗೌರವಿಸುವುದು ಹೆಮ್ಮೆಯ ವಿಚಾರವಾಗಿದೆ ಎಂದು ಪಿಯೂಸ್ ರೋಡ್ರಿಗಸ್ ಸುದ್ದಿಗಾರರಿಗೆ ವಿವರಿಸಿದರು.