ಅಪರಾಧ ತಡೆಗೆ ಸೀಸಿ ಕ್ಯಾಮರಾ ಕಣ್ಗಾವಲು

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಎಷ್ಟೇ ಪೊಲೀಸ್ ಕಾವಲಿದ್ದರೂ, ರಾತ್ರಿ ವೇಳೆ ಗಸ್ತು ನಡೆಸಿದರೂ ಗ್ರಾಮಾಂತರ ಭಾಗದಲ್ಲಿ ಪುಡಿಗಳ್ಳರ ಕಾಟ ತಪ್ಪಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಕಳ್ಳರನ್ನು ಪತ್ತೆ ಮಾಡಲು ಸಾರ್ವಜನಿಕರು ನಿದ್ದಗೆಟ್ಟು ಕಾದರೂ ಸಾಧ್ಯವಾಗಲಿಲ್ಲ. ಇದನ್ನು ಮನಗಂಡ ಗ್ರಾಮಸ್ಥರು ತಮ್ಮ ಮಳಿಗೆ, ದೇವಸ್ಥಾನ, ಮಸೀದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸೀಸಿ ಕ್ಯಾಮರಾ ಅಳವಡಿಸಲು ಮುಂದಾಗಿದ್ದಾರೆ. ಇದಕ್ಕೆ ಗ್ರಾಮಸ್ಥರನ್ನು ಪ್ರೇರೇಪಿಸಿದವರು ಗ್ರಾಮಾಂತರ ಸಂಪ್ಯ ಠಾಣೆಯ ಎಸೈ ಅಬ್ದುಲ್ ಖಾದರ್. ತಮ್ಮ ಸುಪರ್ಧಿಯಲ್ಲಿ ಬರುವ 17 ಗ್ರಾಮಗಳ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಂದಲೇ ಈಗಾಗಲೇ ಸೀಸಿ ಕ್ಯಾಮರಾವನ್ನು ಅಳವಡಿಸುವ ಮೂಲಕ ಅಪರಾಧ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸಲು ಎಸೈ ಮುಂದಾಗಿದ್ದಾರೆ.

ಗ್ರಾಮಾಂತರ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಹೊರ ಠಾಣೆಯ ಪರಿಸರದಲ್ಲಿ ಪೊಲೀಸ್ ಇಲಾಖೆ ಮೂರು ಕ್ಯಾಮರಾಗಳನ್ನು ಮಾತ್ರ ಅಳವಡಿಸಿದ್ದು, ಉಳಿದಂತೆ ಎಲ್ಲೂ ಇಲಾಖೆಯಿಂದ ಸೀಸಿ ಕ್ಯಾಮರಾ ಅಳವಡಿಸಿಲ್ಲ. ಸಾರ್ವಜನಿಕರೇ ಕ್ಯಾಮರಾವನ್ನು ಅಳವಡಿಸುವ ಮೂಲಕ ಇಲಾಖೆಯ ಜೊತೆ ಕೈ ಜೋಡಿಸಿದ್ದಾರೆ. ಪ್ರಮುಖವಾಗಿ ಆರ್ಯಾಪು, ಒಳಮೊಗ್ರು, ಕೆದಂಬಾಡಿ, ಕೆಯ್ಯೂರು, ಸರ್ವೆ, ಅರಿಯಡ್ಕ, ನೆಟ್ಟಣಿಗೆ ಮುಡ್ನೂರು, ಪಡುವನ್ನೂರು, ಬಡಗನ್ನೂರು, ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ, ಬಲ್ನಾಡು, ಮಾಡ್ನೂರು, ಮುಂಡೂರು, ಕುರಿಯ ಗ್ರಾಮಗಳ ಪ್ರಮುಖ ಸ್ಥಳಗಳಲ್ಲಿ ಈಗಾಗಲೇ ಕ್ಯಾಮರಾವನ್ನು ಅಳವಡಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ಇನ್ನೂ ಕ್ಯಾಮರಾ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.

ಅಪರಾಧಕ್ಕೆ ಬ್ರೇಕ್ ಪೊಲೀಸ್ ಇಲಾಖೆಯ ಮನವಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಒಂದು ತಿಂಗಳಲ್ಲಿ ಸುಮಾರು 58 ಕಡೆಗಳಲ್ಲಿ ಕ್ಯಾಮರಾ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ 17 ಗ್ರಾಮಗಳಲ್ಲಿ ಕ್ಯಾಮರಾ ಅಳವಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದೇವೆ. ಮನವಿಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಕ್ಯಾಮರಾ ಅಳವಡಿಸಿದ ಬಳಿಕ ಅಪರಾಧ ಪ್ರಕರಣಗಳಿಗೂ ಬ್ರೇಕ್ ಬಿದ್ದಿರುವುದು ಸಂತಸ ತಂದಿದೆ” ಎನ್ನುತ್ತಾರೆ ಎಸೈ ಅಬ್ದುಲ್ ಖಾದರ್.