ಚಾಲಕನ ನಿರ್ಲಕ್ಷ್ಯಕ್ಕೆ ಚರಂಡಿಗಿಳಿಯಿತು ಬಸ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅಡ್ಡಾದಿಡ್ಡಿ ಚಲಿಸಿದ ಬಸ್ಸೊಂದು ಮಾರ್ಗದ ಪಕ್ಕದಲ್ಲೇ ಇದ್ದ ಚರಂಡಿಗೆ ಬಿದ್ದು ಆತಂಕ ಸೃಷ್ಟಿಸಿದ ಘಟನೆ ನಗರದ ಎಂ ಜಿ ರಸ್ತೆಯಲ್ಲಿ ನಡೆದಿದೆ.

ನಗರ ಸ್ಟೇಟ್ ಬ್ಯಾಂಕಿನಿಂದ ಕುಂಜತ್ತಬೈಲ್ ಕಡೆಗೆ ಸಾಗುತ್ತಿದ್ದ ನಗರ ಸಾರಿಗೆ ಖಾಸಗಿ ಬಸ್ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗೆ ಸಿಕ್ಕಿ ಚರಂಡಿಯತ್ತ ಸರಿದಿದೆ. ಈ ವೇಳೆ ಇದೇ ಮಾರ್ಗದ ಮೂಲಕ ಬರುತ್ತಿದ್ದ ವಾಹನಗಳಿಗೆ ಸಂಚರಿಸಲು ಕಷ್ಟಸಾಧ್ಯವಾಗಿ ರಸ್ತೆ ಪೂರ್ತಿ ಬ್ಲಾಕ್ ಆಗಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸರು ಬಸ್ಸನ್ನು ತೆರವುಗೊಳಿಸಲು ಯತ್ನಿಸಿದರು.

ಸಾರ್ವಜನಿಕರು ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯನ್ನು ತರಾಟೆಗೆ ತೆಗೆದುಕೊಂಡರು. ಕೆಲವು ದಿನಗಳ ಹಿಂದೆಯಷ್ಟೇ ಸರಕಾರಿ ಬಸ್ ಕೂಡಾ ಇದೇ ಕಿರಿದಾದ ರಸ್ತೆಯಲ್ಲಿ ಪಕ್ಕದ ಚರಂಡಿಗೆ ಸರಿದು ರಸ್ತೆ ಕೆಲಕಾಲ ಬ್ಲಾಕ್ ಆಗಿತ್ತು.