4 ಪ್ರಮುಖ ಕ್ರಿಮಿನಲ್ ಕೃತ್ಯ ಬೇಧಿಸಿದ ಸಿಸಿಬಿ ಪೊಲೀಸರಿಗೆ 50,000 ರೂ ಬಹುಮಾನ

ಮಂಗಳೂರು : ನಗರದಲ್ಲಿ ನಡೆದ ಅಪರಾಧ ಕೃತ್ಯಗಳನ್ನು ಸಮರ್ಥರೀತಿಯಲ್ಲಿ ಬೇಧಿಸಿ ಆರೋಪಿಗಳನ್ನು ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸರ ಕಾರ್ಯವೈಖರಿಯನ್ನು ಕಂಡ ಡಿಜಿಪಿ ರೂಪಕ್ ಕುಮಾರ್ ದತ್ತಾ ಅವರು ಪೊಲೀಸರಿಗೆ ನಗದು ಬಹುಮಾನ ಕೊಟ್ಟು ಗೌರವಿಸಿದ್ದಾರೆ.

ಸಿಸಿಬಿ ಪೊಲೀಸ್ ಇನಸ್ಪೆಕ್ಟರ್ ಸುನಿಲ್ ನಾಯ್ಕ್ ಜೊತೆಗೆ ಪಿಎಸೈ ಶ್ಯಾಮಸುಂದರ್ ಮತ್ತವರ ತಂಡ ನಾಲ್ಕು ಪ್ರಮುಖ ಪ್ರಕರಣಗಳನ್ನು ಬೇಧಿಸಿದೆ. ಉಳ್ಳಾಲದ ಟೆಂಪೋ ಚಾಲಕ ಆಸ್ಟಿನ್ ಚೂರಿ ಇರಿತ ಪ್ರಕರಣವನ್ನು ಘಟನೆ ನಡೆದ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದೆ. ಗಾಂಜಾ ಪ್ರಕರಣದಲ್ಲಿ ಆರೋಪಿ ಬಂಧನ, ಅಡ್ಯಾರ್ ಪದವಿನ ಹಲ್ಲೆ ಪ್ರಕರಣ ಮತ್ತು ಕೋಟೆಕಾರ್ ಬ್ಯಾಂಕಿನ ದರೋಡೆ ಪ್ರಕರಣವನ್ನು ಇವರು ಸಮರ್ಥವಾಗಿ ಬೇಧಿಸಿದ್ದಾರೆ.

ಸಿಸಿಬಿ ಪೊಲೀಸ್ ತಂಡಕ್ಕೆ 50,000 ರೂ ನಗದು ಬಹುಮಾನ ನೀಡಿರುವ ದತ್ತಾ, ಅಭಿನಂದನಾ ಪತ್ರವನ್ನೂ ನೀಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲೂ ಅಪರಾಧ ಕೃತ್ಯಗಳನ್ನು ಸಮರ್ಥವಾಗಿ ಬೇಧಿಸಿ ನೈಜ ಆರೋಪಿಗಳಿಗೆ ಶಿಕ್ಷೆಯಾಗುವ ಕೆಲಸ ಮಾಡಿರಿ ಎಂದು ಸೂಚನೆ ನೀಡಿದ್ದಾರೆ.