ಗೋಸಾಗಾಟದ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ : ಚಾಲಕ ಪರಾರಿ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡುತ್ತಿದ್ದ ಓಮ್ನಿಯೊಂದು ಸಾರ್ವಜನಿಕರಿಂದ ತಪ್ಪಿಸಿಕೊಳ್ಳುವ ಭರಾಟೆಯಲ್ಲಿ ಹಿಮ್ಮುಖವಾಗಿ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕೂಡಿಹಾಕಿದ್ದ ಒಂದು ಹಸು ಮತ್ತು ಕರು ಪತ್ತೆಯಾಗಿರುವುದು ವರದಿಯಾಗಿದೆ.

ಮಾಂಟ್ರಾಡಿಯ ಭಂಡಸಾಲೆಯಲ್ಲಿ ಒಂಟಿ ಮಹಿಳೆಯ ಸಾಕು ದನ ಖರೀದಿಸಲು ಗುರುವಾರ ಬೆಳಿಗ್ಗೆ ಬಂದಿದ್ದ ವ್ಯಕ್ತಿಯೊಬ್ಬರು ದನದ ರೇಟು ಮೂರು ಸಾವಿರ ರೂ ಜಾಸ್ತಿಯಾಯಿತ್ತೆಂದು ಹೇಳಿ ಬಿಟ್ಟು ಹೋಗಿದ್ದರು. ಆದರೆ ಅದೇ ರಾತ್ರಿ ಆ ಮನೆಯಿಂದ ದನವನ್ನು ಕಳ್ಳತನ ಮಾಡಲಾಗಿತ್ತು. ಈ ವಿಷಯ ಸ್ಥಳೀಯರಿಗೆ ಗೊತ್ತಾಗಿ ಓಮ್ನಿಯನ್ನು ಬೇರೆ ವಾಹನದಲ್ಲಿ ಬೆನ್ನಟ್ಟಿಕೊಂಡು ಬಂದು ಅಳಿಯೂರಿನಲ್ಲಿ ಅಡ್ಡನಿಲ್ಲಿಸಿದ್ದರು. ಅಪಾಯವನ್ನರಿತ ಓಮ್ನಿ ಚಾಲಕ ತನ್ನ ವಾಹನವನ್ನು ಹಿಮ್ಮುಖವಾಗಿ ಚಲಿಸಿ ಪರಾರಿಯಾಗಲೆತ್ನಿಸಿದಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಚಾಲಕ ವಾಹನವನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾನೆ.

ವಾಹನದಲ್ಲಿ ಒಂದು ಗಂಡು ಕರು ಮತ್ತು ದನವನ್ನು ಹಿಂಸಾತ್ಮಕವಾಗಿ ಕೂಡಿ ಹಾಕಲಾಗಿದ್ದು, ಸಾರ್ವಜನಿಕರು ವಾಹನದ ಬಾಗಿಲು ತೆರೆದಾಗ ಒಂದು ಹಸು ಹೆದರಿ ಓಡಿ ಹತ್ತಿರದ ಮನೆ ಕಂಪೌಂಡ್ ಸೇರಿದೆ ಎನ್ನಲಾಗಿದೆ. ಇದೇ ವಾಹನದಲ್ಲಿ ಕೊಂಡೊಯ್ಯಲೆಂದು ಹತ್ತಿರದ ಶಾಲಾ ಮೈದಾನದಲ್ಲಿ ಕಟ್ಟಿ ಹಾಕಿದ್ದ ಒಂದು ಹಸು ಕೂಡ ಹಗ್ಗ ಸಮೇತ ಅಲ್ಲಿಂದ ಪರಾರಿಯಾಗಿದೆ ಎಂದು ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ ದನ ಅಪಹರಿಸಿದ ಆರೋಪಿಗಳು ನಂತರ ಮಹಿಳೆಯ ಮೊಬೈಲಿಗೆ ಕರೆ ಮಾಡಿ ನಿಮಗೆ ಹಸುವನ್ನು ವಾಪಾಸು ಕೊಡುತ್ತೇವೆ, ಜತೆಗೆ ಹಣವನ್ನು ನೀಡುತ್ತೇವೆ. ಆದರೆ ಹಸುವನ್ನು ನೀವು ನಮಗೆ ಮಾರಾಟ ಮಾಡಿದ್ದೆಂದು ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ್ದು, ಪ್ರಕರಣದಿಂದ ಬಚಾವಾಗುವ ತಂತ್ರ ನಡೆಸಿದ್ದಾರೆನ್ನಲಾಗಿದೆ.

ಪೊಲೀಸ್ ವರದಿ

ಪ್ರಕರಣದ ಬಗ್ಗೆ ಪೊಲೀಸರು ನೀಡಿದ ಮಾಹಿತಿಯಂತೆ ಕೆ ಎ 19 ಎಂ ಇ 2569 ಮಾರುತಿ ಓಮ್ನಿಯಲ್ಲಿ ಗಂಡು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದದನ್ನು ಅಳಿಯೂರಿನಲ್ಲಿ ಪೊಲೀಸರು ಗುರುವಾರ ರಾತ್ರಿ ಪತ್ತೆ ಹಚ್ಚಿ ವಾಹನ ಮತ್ತು ಅದರಲ್ಲಿದ್ದ ಕರುವನ್ನು ವಶಪಡಿಸಿಕೊಂಡಿರುತ್ತಾರೆ. ಚಾಲಕ ಪರಾರಿಯಾಗಿದ್ದು ಪ್ರಕರಣ ತನಿಖೆ ನಡೆಯುತ್ತಿದೆ ಎಂದಿದ್ದಾರೆ.