ಕೊಡ್ಲಿಪೇಟೆ ಘಟನೆಯಿಂದ ಗರಿಗೆದರಿದ `ಅಕ್ರಮ’ ಗೋ ಸಾಗಾಟ ವಿವಾದ

ಸಾಂದರ್ಭಿಕ ಚಿತ್ರ

ಮಂಗಳೂರು : ಕೊಡಗಿನ ಕೊಡ್ಲಿಪೇಟೆಯಲ್ಲಿ ಇತ್ತೀಚೆಗೆ ಪೊಲೀಸರು ಮಂಗಳೂರು ಮೂಲದ  ಇಬ್ಬರನ್ನು ಮಂದಿಯನ್ನು ಬಂಧಿಸಿ ಅವರಿಂದ  `ಕಳ್ಳತನಗೈದ’  ದನಗಳನ್ನು  ವಶಪಡಿಸಿಕೊಂಡ ಪ್ರಕರಣ ಗೋರಕ್ಷಕರು ಹಾಗೂ ಅಕ್ರಮ ಗೋಸಾಗಾಟಗಾರರ ನಡುವೆ ಆಗಾಗ ನಡೆಯುತ್ತಿರುವ ಮುಖಾಮುಖಿಗೆ ಹೊಸ ತಿರುವನ್ನು ನೀಡಿದೆಯೆಂದು ಹೇಳಲಾಗುತ್ತಿದೆ.

ಈ ಘಟನೆ ಸಂದರ್ಭ ಆರು ಮಂದಿ ಆರೋಪಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಂದು ಬೆಳವಣಿಗೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ವಾಹನವನ್ನು ಸ್ವಘೋಷಿತ ಗೋರಕ್ಷಕರು ಸುಟ್ಟು ಹಾಕಿದ್ದರು.

ಈ ಪ್ರಕರಣದಲ್ಲಿ ಕುಶಾಲನಗರ ಪೊಲೀಸರು ತಮ್ಮ ಜೀವದ ಹಂಗು ತೊರೆದು ಗೋಸಾಗಾಟಗಾರರನ್ನು ಬೆಂಬತ್ತಿ ಸೆರೆ ಹಿಡಿದಿದ್ದರೆಂಬುದು ವಿಶೇಷ. ಮೇಲಾಗಿ ಗೋ ಸಾಗಾಟ ವಾಹನದೊಂದಿಗಿದ್ದ ಇನ್ನೊಂದು ವಾಹನವು ಪೊಲೀಸರನ್ನು ತಡೆಯುವ ಪ್ರಯತ್ನ ನಡೆಸಿದ ಹೊರತಾಗಿಯೂ ಪೊಲೀಸರು ಗೋವುಗಳನ್ನು ವಶಪಡಿಸಿಕೊಂಡಿದ್ದರು. ಕೊಡ್ಲಿಪೇಟೆ ಘಟನೆ ಕೊಡಗು ಜಿಲ್ಲೆಯಲ್ಲಿ ಗೋ ರಕ್ಷಣೆ ಆಂದೋಲನಕ್ಕೆ ಕಾರಣವಾಗಬಹುದೆಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಮುಸ್ಲಿಂ ಯುವಜನ ಸಮಾವೇಶದಲ್ಲಿಯೂ ಭಾಷಣಕಾರರು ಗೋ ಸಾಗಾಟ ವಿಚಾರವನ್ನು ಎತ್ತಿದ್ದು, ಸಮಾವೇಶದಲ್ಲಿ ಮಾತನಾಡಿದ ಸಿಪಿಐಎಂ ನಾಯಕ ಶ್ರೀರಾಮ ರೆಡ್ಡಿ “ಗೋ ರಕ್ಷಣೆ ಒಂದು ರೀತಿಯಲ್ಲಿ ಸಮಾಜದಲ್ಲಿ ತೊಂದರೆಯುಂಟು ಮಾಡುವ ಕೃತ್ಯವಾಗಿದೆ. ದನಗಳು ಕಳವಾಗಿದೆಯೆಂದಾದರೆ ಸರಿ ಆದರೆ ಕಾನೂನುಬದ್ಧವಾಗಿ ಗೋಸಾಗಾಟ ಮಾಡುವವರನ್ನೂ ತಡೆಯಲಾಗುತ್ತಿದೆ.  ಗೋ ಸಾಗಾಟ ಉದ್ಯಮ ನಡೆಸುವ ಮುಸ್ಲಿಮರ ಮೇಲೆ ಪ್ರಹಾರ ನಡೆಸುವ ಕಾರ್ಯವಿದು” ಎಂದವರು ಹೇಳಿದ್ದರು.

ಈಗಾಗಲೇ ಸ್ವಘೋಷಿತ ಗೋರಕ್ಷಕರು ರಾಜ್ಯದಲ್ಲಿರುವ 64,000 ಅಲೆಮಾರಿ ದನಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.