ಪತ್ರಕರ್ತೆ ಗೌರಿ ಹತ್ಯೆ ಖಂಡಿಸಿ ಕೆಥೋಲಿಕ್ ಸಭಾ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳೂರು ಕೆಥೋಲಿಕ್ ಸಭಾದ ವತಿಯಿಂದ ಪ್ರತಿಭಟನೆ ನಡೆಯಿತು.

“ಮನುಷ್ಯನ ಚಿಂತನೆಗಳು ಒಬ್ಬರಿಂದ ಇನ್ನೊಬ್ಬರಿಗೆ ವಿಭಿನ್ನವಾಗಿರುತ್ತದೆ. ಹೀಗಂತ ಇನ್ನೊಬ್ಬನ ಸಿದ್ಧಾಂತ ನಮಗೆ ಒಪ್ಪಿಗೆಯಾಗಿಲ್ಲ ಎನ್ನುವ ಕಾರಣಕ್ಕೆ ಕೊಲ್ಲುವುದು ಖಂಡಿತಾ ಸರಿಯಲ್ಲ. ಗೌರಿ ಸಾವು ಪ್ರಜಾಪ್ರಭುತ್ವದ ಕೊಲೆ. ಗೌರಿ ಕೊಲೆ ಆರೋಪಿಗಳ ಶೀಘ್ರ ಬಂಧನವಾಗಲಿ” ಎಂದು ಮಂಗಳೂರು ಡಯೋಸಿಸ್ ನಿರ್ದೇಶಕ ಫಾ ಮ್ಯಾಥ್ಯೂ ವಾಝ್ ಹೇಳಿದರು.

ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ ಹಯವದನ, ಗೌರಿ ಬಾಲ್ಯಜೀವನದಿಂದಲೇ ನಡೆಸಿಕೊಂಡು ಬಂದ ಹೋರಾಟದ ಬಗ್ಗೆ ವಿವರಿಸಿದರು.

ಹಿರಿಯ ವಾಗ್ಮಿ ಮಹಮ್ಮದ್ ಕುಂಞÂ ಮಾತನಾಡಿ, “ಇಂದು ಗೌರಿ ಹತ್ಯೆ ಕೇವಲ ಕರ್ನಾಟಕವಷ್ಟೇ ಅಲ್ಲದೇ ಇಡೀ ದೇಶ, ವಿಶ್ವದಲ್ಲಿ ಪ್ರತಿಭಟನೆ ನಡೆದಿದೆ. ಗೌರಿ ಲಂಕೇಶ್ ನಮ್ಮ ರಾಜ್ಯದ ಸೌಹಾರ್ದತೆಗಾಗಿ, ಒಳಿತಿಗಾಗಿ, ಜನರ ಮಧ್ಯೆ ಶಾಂತಿ ಸೇತುವೆ ಕಟ್ಟುವುದಕ್ಕೆ ಪ್ರತಿಪಾದಿಸಿ ಹೋರಾಟ ಮಾಡಿದ್ದರು. ಸಂವಿಧಾನ ಕೊಟ್ಟ ಹಕ್ಕುಗಳನ್ನು ರಕ್ಷಿಸಲು ಆಕೆ ಬಹಳಷ್ಟು ಕೆಲಸ ಮಾಡಿದ್ದರು. ಈ ಕಾರಣಕ್ಕೆ ಗೌರಿ ಹತ್ಯೆಯಾಯಿತು” ಎಂದರು.

“ವಿಚಾರಗಳನ್ನು ಎದುರಿಸಲು ಧೈರ್ಯ ಇಲ್ಲದ, ವೈಚಾರಿಕತೆಯನ್ನು ಎದುರಿಸಲು ತಾಕತ್ತಿಲ್ಲದ ಹೇಡಿಗಳು ಗೌರಿಯನ್ನು ಕೊಂದಿದ್ದಾರೆ. ಕೊಲ್ಲುವುದು ಒಂದೇ ಇಂದಿನ ಪರಿಹಾರ ಅಲ್ಲ, ಕೊಲ್ಲುವ ಮೂಲಕ ಯಾವುದೇ ಹೋರಾಟ, ಸಿದ್ಧಾಂತವನ್ನು ಮುಗಿಸಲು ಸಾಧ್ಯವಿಲ್ಲ. ಅದು ಸಾಧ್ಯವಾಗುವುದೂ ಇಲ್ಲ. ಕೊಲೆಗಳು ನಡೆಯಬಾರದು, ಕೊಲೆಗಳ ಮೂಲಕ ಭೀತಿ ಹುಟ್ಟಿಸಿ ವ್ಯವಸ್ಥೆಯನ್ನು ಹಾಳು ಮಾಡುವುದು ಸರಿಯಲ್ಲ. ಧಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ, ಗೌರಿ ಹತ್ಯೆಯಾಗಿದೆ. ಯಾರು ಕೊಲೆ ಮಾಡಿದ್ದಾರೆ ಅನ್ನುವುದಕ್ಕಿಂತ ಈ ಕೊಲೆ ರೂಪಿಸುತ್ತಿರುವ ಹಿಂದಿರುವ ಶಕ್ತಿಗಳನ್ನು ಈ ಸರಕಾರ ಗುರುತಿಸಿ, ಅತ್ಯಂತ ಕಠಿಣವಾಗಿ ಶಿಕ್ಷೆಗೊಳಪಡಿಸಬೇಕಾಗಿದೆ. ಕೊಲೆಗಳ ಹಿಂದೆ ದೊಡ್ಡ ಷಡ್ಯಂತ್ರ ಇರುತ್ತದೆ. ತಮ್ಮ ಆಲೋಚನೆಗಳನ್ನು ಒಪ್ಪಿಕೊಳ್ಳದ ವ್ಯಕ್ತಿಗಳನ್ನು ಕೊಲ್ಲುವುದಾದರೆ ಈ ಸಮಾಜ ಅಪಾಯಕ್ಕೆ ಸಿಲುಕುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಇದರ ಹಿಂದಿರುವ ಶಕ್ತಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಲೇಬೇಕಾಗಿದೆ” ಎಂದು ಮಹಮ್ಮದ್ ಒತ್ತಾಯಿಸಿದರು.

“ಭಿನ್ನಾಭಿಪ್ರಾಯವನ್ನು ದಮನಿಸುವ ಭಯಾನಕ ವಾತಾವರಣ ನಾವು ನೋಡುತ್ತಿದ್ದೇವೆ. ಆದರೆ ಈ ಪ್ರತಿಭಟನೆ ಕೇವಲ ಸಾಂಕೇತಿಕವಾಗಿ ನಡೆಯದೇ ದೌರ್ಜನ್ಯವನ್ನು ಪ್ರಶ್ನಿಸುತ್ತೇವೆ ಎನ್ನುವ ಸಂಕಲ್ಪದ ಸಭೆ ಆಗಬೇಕಾಗಿದೆ. ಗೌರಿ ಹೋರಾಟ ಮಾಡಿದ ಹಕ್ಕುಗಳಿಗೆ ನಾವು ಸತ್ಯ ಕಲ್ಪಿಸುತ್ತೇವೆ ಎನ್ನುವ ಸಂಕಲ್ಪವನ್ನು ನಾವು ಇಂದು ಮಾಡಬೇಕಾಗಿದೆ” ಎಂದರು. ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿ ಅಪರಜಿಲ್ಲಾಧಿಕಾರಿ ಕುಮಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.