ಬಡವರು-ಶ್ರೀಮಂತರ ಮಧ್ಯೆ ಜಾತಿ ಅಂತರ ಹೆಚ್ಚಿಸಿದೆ : ಸಿಪಿಐಎಂ ಚಿಂತಕ

ಹಾಸನ : ಜಾತಿ ಆಧರಿತ ತಾರತಮ್ಯದಿಂದ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಬೆಳೆಯುತ್ತಿದೆ ಎಂದು ಸಿಪಿಐಎಂನ ಪ್ರಸಿದ್ಧ ಚಿಂತಕ ಲಕ್ಷ್ಮೀನಾರಾಯಣ ಅಭಿಪ್ರಾಯಪಟ್ಟರು.

ಹೊಳೆನರಸೀಪುರ ತಾಲೂಕಿನ ಸಿಂಗರನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಲಿತ ಹಕ್ಕುಗಳ ಸಮಿತಿಯ(ಡಿಎಚ್‍ಎಸ್) ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ದಲಿತರು ತಮ್ಮ ಪ್ರದೇಶದಲ್ಲಿ ಮೇಲ್ವರ್ಗದವರಿಂದ ನಡೆಯುತ್ತಿರುವ ಅಸಮಾನತೆ ವಿರುದ್ಧ ಹೋರಾಟ ಆರಂಭಿಸಿದ್ದು ಇದರಿಂದ ಅಸಮಾಧಾನಗೊಂಡ ಮೇಲ್ವರ್ಗದವರು ಸಂಘರ್ಷಕ್ಕೆ ಮುಂದಾಗಿದ್ದಾರೆ ಎಂದರು.

“ದೇವಸ್ಥಾನ ಮತ್ತು ಸಮುದಾಯ ಭವನವೊಂದಕ್ಕೆ ಪ್ರವೇಶ ನಿರಾಕರಿಸಲಾಗಿದ್ದ ವಿಷಯ ಮುಂದಿಟ್ಟು ಕಳೆದ ವರ್ಷ ದಲಿತರು ತಮ್ಮ ಊರಾದ ಸಿಂಗರನಹಳ್ಳಿಯಲ್ಲಿ ತಾರತ್ಯಮ್ಯ ವಿಷಯ ಮುಂದಿಟ್ಟು ಹೋರಾಟ ಆರಂಭಿಸಿದ್ದರು. ಈಗ ಅವರೆಲ್ಲ ಈ ದೌಜ್ಯನ್ಯದ ವಿರುದ್ಧ ಹೋರಾಡಲು ಡಿಎಚ್‍ಎಸ್ ವೇದಿಕೆಯಡಿ ಒಗ್ಗೂಡಿದ್ದಾರೆ” ಎಂದವರು ವಿವರಿಸಿದರು.

“ದಲಿತರಿಂದಲೇ ಈ ತಾರತಮ್ಯ ನಿರ್ಮೂಲನೆ ಸಾಧ್ಯವಿಲ್ಲ. ಇದಕ್ಕೆ ಇತರ ಜಾತಿಯವರು ಮತ್ತು ಪ್ರಗತಿಪರ ಚಿಂತಕರ ಕೊಡಗೆ ಅವಶ್ಯ”ವೆಂದು ಲಕ್ಷ್ಮೀನಾರಾಯಣ ಹೇಳಿದರು.

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿ ಮಾತನಾಡಿ, “ದಲಿತರು ಈವರೆಗೂ ತುಂಡು ಭೂಮಿ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ.  ಭೂಮಿ ಇರುವವರೆಲ್ಲರೂ ಶ್ರೀಮಂತರಾಗಿದ್ದಾರೆ. ಇಲ್ಲಿಯವರೆಗಿನ ಎಲ್ಲ ಸರ್ಕಾರಗಳು ಅಗತ್ಯವಿರುವವರಿಗೆ ಬೂಮಿ ಹಂಚಿಕೆ ಬದಲಿಗೆ ಹಲವು ಪ್ರಾಜೆಕ್ಟುಗಳಿಗಾಗಿ ಬಡವರಲ್ಲಿದ್ದ ಒಂದಷ್ಟು ಭೂಮಿ ಕಬಳಿಸಿಕೊಂಡಿವೆ” ಎಂದು ಬೇಸರ ವ್ಯಕ್ತಪಡಿಸಿದರು.