ಜಿಲ್ಲೆಯ ನಮೋ ಭಕ್ತ ವ್ಯಾಪಾರಿಗಳಿಂದ ಕ್ಯಾಶ್ ಲೆಸ್ ವ್ಯವಹಾರಕ್ಕೆ ಹಿಂದೇಟು !

ವಿಶೇಷ ವರದಿ

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ಪತ್ತೆ ಮಾಡುವುದನ್ನು ಬಿಟ್ಟು ಕ್ಯಾಶ್ ಲೆಸ್ ವ್ಯವಹಾರಕ್ಕೆ ಭಾರೀ ಉತ್ತೇಜನ ನೀಡುತ್ತಿದ್ದರೂ ನಮೋ ಭಕ್ತ ವ್ಯಾಪಾರಿ ಸಮೂಹ ಮಾತ್ರ ಹಳೇ ನಗದು ವಹಿವಾಟಿಗೆ ಜೋತುಬಿದ್ದಿದೆ.

ಸ್ವೈಪಿಂಗ್ ಮಷಿನ್ ಬಳಸಿ ಪ್ಲಾಸ್ಟಿಕ್ ಕಾರ್ಡ್ ಬಳಕೆ ಅಥವ ಪೇಟಿಎಂನಂತಹ ನಗದು ರಹಿತ ಹಣ ವರ್ಗಾವಣೆ ವ್ಯವಸ್ಥೆಗೆ ಕೇಂದ್ರ ಆಡಳಿತಾರೂಢ ರಾಜಕೀಯ ಪಕ್ಷದ ಬೆಂಬಲಿಗ ವ್ಯಾಪಾರಿ ವರ್ಗ ಸಿದ್ಧರಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಅಲ್ಲೊಂದು ಇಲ್ಲೊಂದು ಮಂದಿ ಪ್ರಚಾರಕ್ಕಾಗಿ ಮತ್ತು ಅತ್ಯುತ್ಸಾಹಿ ಭಕ್ತ ಮಹಾಶಯರು ಮಾತ್ರ ಇಂತಹ ಕ್ಯಾಶ್ ಲೆಸ್ ವ್ಯವಹಾರಕ್ಕೆ ಮುಂದಾಗಿದ್ದಾರೆ. ಸಾಂಪ್ರದಾಯಿಕವಾಗಿ ಪ್ಲಾಸ್ಚಿಕ್ ಕಾರ್ಡ್ ಬಳಕೆ ಮಾಡುತ್ತಿದ್ದ ಪೆಂಟ್ರೊಲ್ ಬಂಕುಗಳು, ಬಾರ್ ಅಂಡ್ ರೆಸ್ಟೊರೆಂಟುಗಳು, ಮಾಲ್ ಮತ್ತು ಡಿಪಾರ್ಟಮೆಂಟಲ್ ಅಂಗಡಿಗಳನ್ನು ಹೊರತುಪಡಿಸಿದರೆ ದಿನಸಿ ಅಂಗಡಿಗಳ ಸಹಿತ ಬಹುತೇಕ ಕಡೆ ಕ್ಯಾಶ್ ಲೆಸ್ ವ್ಯವಸ್ಥೆ ಆರಂಭವಾಗಿಲ್ಲ.

ಸಾಮಾನ್ಯವಾಗಿ ಪ್ರಧಾನಿ ಮೋದಿ ಅವರ ಭಕ್ತ ಸಮೂಹದಲ್ಲಿ ದೊಡ್ಡ ಸಂಖ್ಯೆಯಲ್ಲಿ ವ್ಯಾಪಾರಿಗಳೇ ಸೇರಿದ್ದು, ತಮ್ಮ ನಾಯಕನ ನಿಷ್ಠೆಗಾಗಿಯಾದರೂ ಕ್ಯಾಶ್ ಲೆಸ್ ವ್ಯವಸ್ಥೆ ಅಳವಡಿಸಿಕೊಳ್ಳುವ ನಿರೀಕ್ಷೆ ಇತ್ತು. ಈಗ ಅಂತಹ ನಿರೀಕ್ಷೆ ಹುಸಿಯಾಗಿದೆ. ಕೇಂದ್ರ ಸರಕಾರದ ಬೆಂಬಲಿಗ ವ್ಯಾಪಾರಿಗಳೇ ಸರಕಾರದ ಹೊಸ ನೀತಿಗೆ ಬೆಂಬಲ ನೀಡಲು ಮನಸ್ಸು ಮಾಡುತ್ತಿಲ್ಲ ಎಂಬುದರ ಹಿಂದೆ ಮುಂದೇನಾಗಬಹುದು ಎಂಬ ಭೀತಿ ಅವರಲ್ಲಿ ಮೂಡಿರುವುದು ಸುಳ್ಳಲ್ಲ.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದಂದಿನಿಂದ ಪ್ರಧಾನಿಯವರ ಆಶಯಕ್ಕೆ ತಕ್ಕಂತೆ ನವೋ ಭಕ್ತರು ನಡೆದುಕೊಂಡು ಬಂದಿಲ್ಲ ಎನ್ನುವುದಕ್ಕೆ ಹತ್ತು ಹಲವಾರು ಉದಾಹರಣೆಗಳಿವೆ. ಪ್ರಧಾನಿ ತಮ್ಮ ಮೊದಲ ಭಾಷಣದಲ್ಲಿ ಹೇಳಿದ ಮಾತುಗಳಿಗೆ ಕವಡೆ ಕಿಮ್ಮತ್ತು ನೀಡಲಾಗಿಲ್ಲ. ಸ್ವಚ್ಛ ಭಾರತ ಅಭಿಯಾನದಲ್ಲಿ ಕೂಡ ಭಕ್ತರು ಪ್ರಾಮಾಣಿಕರಾಗಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಹಾಗೇನಾದರೂ  ಆಗಿದ್ದರೆ ನಮೋ ಭಕ್ತರೇ ಹೆಚ್ಚಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೀದಿ ಬೀದಿಗಳು ಸ್ವಚ್ಛವಾಗಿರುತ್ತಿದ್ದುವು.

ಕಳೆದ ತಿಂಗಳು ಪ್ರಧಾನಿಯವರು ಐನೂರು, ಸಾವಿರ ರೂಪಾಯಿ ಹಳೇ ನೋಟುಗಳನ್ನು ನಿಷೇಧ ಮಾಡಿದಾಗ ಮೂರೂವರೆ ಲಕ್ಷ ಕೋಟಿ ರೂಪಾಯಿ ಕಾಳಧನ ನಾಪತ್ತೆ ಆಗಬಹುದು ಎಂದು ಕೇಂದ್ರ ಸರಕಾರ ಅಂದಾಜಿಸಿತ್ತು. ಸರಕಾರದ ಕಪ್ಪು ಹಣ ಅಂದಾಜಿಗೆ ಎಳ್ಳುನೀರು ಬಿಟ್ಟದ್ದೇ ಭಕ್ತ ಸಮೂಹ ಎಂಬುದು ಈಗ ಎಲ್ಲರಿಗೂ ಮನವರಿಕೆ ಆಗಿದೆ. ತಮ್ಮಲ್ಲಿದ್ದ ತೆರಿಗೆ ಕಟ್ಟದ ಹಣವನ್ನು ಮಾತ್ರವಲ್ಲದೆ ಇತರರ ಹಣವನ್ನು ಕೂಡ ಬ್ಯಾಂಕುಗಳ ಮೂಲಕ ಹೊಸ ನೋಟುಗಳಿಗೆ ಸದ್ದಿಲ್ಲದೆ ಮಾರ್ಪಾಡು ಮಾಡಲಾಗಿತ್ತು. ದೇಶ ಭಕ್ತ ವ್ಯಾಪಾರಿಗಳು ಯಾವ ಮುಲಾಜೂ ಇಲ್ಲದೆ ಹಳೇ ನೋಟುಗಳ ತಮ್ಮ ಪ್ರಭಾವದ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಅದನ್ನು ಹೊಸ ನೋಟಾಗಿ ಪರಿವರ್ತಿಸಿದಾಗ ಪ್ರಧಾನಿಯವರ ಮೇಲಿನ ನಿಷ್ಠೆಯನ್ನು ಪಾಲಿಸಲಿಲ್ಲ.

ನವೆಂಬರ್ 8ರಂದು ಘೋಷಣೆ ಮಾಡಿದ ಕಪ್ಪು ಹಣದ ವಿರುದ್ಧದ ಹೋರಾಟ ಯಾವಾಗ ವಿಫಲವಾಗುತ್ತಿದೆ ಎಂದು ಸರಕಾರಕ್ಕೆ ಗೊತ್ತಾಯಿತೊ ಆಗಲೇ ಕ್ಯಾಶ್ ಲೆಸ್ ವ್ಯವಸ್ಥೆಗೆ ಪ್ರಚಾರವನ್ನು ಬದಲಿಸಲಾಯಿತು. ಈಗ ಮತ್ತೆ ಕೂಡ ವ್ಯಾಪಾರಿ ಭಕ್ತ ಸಮೂಹದ ಬುಡಕ್ಕೆ ಕ್ಯಾಶ್ ಲೆಸ್ ವ್ಯವಸ್ಥೆ ಬಂದು ನಿಂತಿದೆ. ವ್ಯಾಪಾರಿಯೊಬ್ಬ ಸಂಪೂರ್ಣ ಕ್ಯಾಶ್ ಲೆಸ್ ವ್ಯವಸ್ಥೆಗೆ ಒಗ್ಗಿಕೊಂಡರೆ ಆತನ ಎಲ್ಲ ವಹಿವಾಟು ನೇರವಾಗಿ ತೆರಿಗೆ ಇಲಾಖೆಯ ಕಣ್ಣೆದುರು ನಡೆಯುತ್ತದೆ. ಆಗ ದೇಶಕ್ಕೆ ತೆರಿಗೆ ಕೊಡದೆ ವಂಚಿಸುತ್ತಿದ್ದ ಮಂದಿ ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ನೀಡಿ

ದ್ದಕ್ಕಿಂತ ಹಲವು ಪಟ್ಟು ತೆರಿಗೆಯನ್ನು ಸರಕಾರಕ್ಕೆ ಪಾವತಿಸಬೇಕಾಗುತ್ತದೆ. ಅದಕ್ಕಾಗಿಯೇ ವ್ಯಾಪಾರಿಗಳು ಕ್ಯಾಶ್ ಲೆಸ್ ವ್ಯವಸ್ಥೆ ಬಗ್ಗೆ ಆತಂಕ ಹೊಂದಿದ್ದಾರೆ.