ನಗದುರಹಿತ ಆರ್ಥಿಕತೆ ದುರಂತಕ್ಕೆ ಆಹ್ವಾನ

ನರೇಂದ್ರ ಮೋದಿ ಸರ್ಕಾರ ಕೈಗೊಂಡ ಕಪ್ಪು ಹಣ ನಿಯಂತ್ರಣ ಕ್ರಮಗಳು ಕಳಪೆ ಯೋಜನೆ ಮತ್ತು ಹುಸಿ ಭರವಸೆಗಳಿಂದ ಸೊರಗುತ್ತಿವೆ.

ಈ ಪ್ರಕ್ರಿಯೆಯಲ್ಲಿ ದೇಶದ ಜನಸಾಮಾನ್ಯರಿಗೆ ಅಪಾರ ಹಾನಿ ಉಂಟಾಗಿರುತ್ತದೆ. ಸಾಮಾನ್ಯ ಜನತೆ ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಂತೆ ಆರ್ಥಿಕತೆಯೂ ಕುಸಿಯುತ್ತದೆ. ಉತ್ಪಾದನೆಯೂ ಕುಂಠಿತವಾಗುತ್ತದೆ. ಇದರಿಂದ ಬಳಕೆಯ ಪ್ರಮಾಣವೂ ಕುಸಿದು ಆರ್ಥಿಕ ಬೆಳವಣಿಗೆಯೂ ಕುಂಠಿತವಾಗುತ್ತದೆ.  

  • ಪವನ್ ಕೆ ವರ್ಮ

ನೋಟು ಅಮಾನ್ಯೀಕರಣ ನಿರ್ಧಾರವನ್ನು ಹಠಾತ್ತನೆ ಘೋಷಿಸಿದ ಪ್ರಧಾನಿ ನರೆಂದ್ರ ಮೋದಿ ತಮ್ಮ ಮುಖ್ಯ ಗುರಿ ಇರುವುದೇ ಕಪ್ಪುಹಣ ನಿಯಂತ್ರಣ ಎಂದು ಹೇಳಿದ್ದರು. ಅಮಾನ್ಯೀಕರಣದಿಂದ ಪರ್ಯಾಯ ಅಕ್ರಮ ಆರ್ಥಿಕ ವ್ಯವಸ್ಥೆ ಕೊನೆಗಾಣುತ್ತದೆ, ನಕಲಿ ನೋಟ್ ದಂಧೆ ಕೊನೆಗೊಳ್ಳುತ್ತದೆ ಮತ್ತು ಕಪ್ಪುಹಣ ಹಾಗೂ ಭಯೋತ್ಪಾದಕರ ನಡುವಿನ ನಂಟು ಇಲ್ಲವಾಗುತ್ತದೆ ಎಂದು ಮೋದಿ ಘೋಷಿಸಿದ್ದರು. ಆದರೆ ತಮ್ಮ ಮೂಲ ಉದ್ದೇಶ ಭಾರತದಲ್ಲಿ ಡಿಜಿಟಲ್ ಆರ್ಥಿಕತೆಯನ್ನು ಸೃಷ್ಟಿಸುವ ಮೂಲ ಉದ್ದೇಶವನ್ನು ಹೊರಗೆಡಹಲೇ ಇಲ್ಲ. ಒಂದು ವೇಳೆ ದೇಶದ ಅರ್ಥವ್ಯವಸ್ಥೆಯಲ್ಲಿ ನಗದುರಹಿತ ವಹಿವಾಟು ಜಾರಿಗೊಳಿಸುವುದೇ ಉದ್ದೇಶವಾಗಿದ್ದಲ್ಲಿ ಚಾಲ್ತಿಯಲ್ಲಿದ್ದ ಶೇ 86ರಷ್ಟು ನಗದು ಹಣವನ್ನು ರದ್ದುಪಡಿಸುವ ಅವಶ್ಯಕತೆಯೇ ಇರಲಿಲ್ಲ. ಡಿಜಿಟಲ್ ಆರ್ಥಿಕತೆಯನ್ನು ರೂಪಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಜನರಿಗೆ ಹಣಕಾಸು ವ್ಯವಹಾರದಲ್ಲಿ ಸಾಕ್ಷರತೆ ನೀಡುವ ಮೂಲಕ ಹಂತ ಹಂತವಾಗಿ ಅರ್ಥವ್ಯವಸ್ಥೆಯನ್ನು ಡಿಜಿಟಲ್ ಮಾಡಬಹುದಿತ್ತು. ಆದರೆ ಬ್ಯಾಂಕಿಂಗ್ ವ್ಯವಸ್ಥೆ ಅಸಮರ್ಪಕವಾಗಿರುವ ಮತ್ತು ತಂತ್ರಜ್ಞಾನದ ಹರವು ಹಲವಾರು ತೊಡಕುಗಳನ್ನು ಎದುರಿಸುತ್ತಿರುವ ಭಾರತದಂತಹ ದೇಶದಲ್ಲಿ ಈ ರೀತಿಯ ಅರ್ಥವ್ಯವಸ್ಥೆಯನ್ನು ಹಠಾತ್ತನೆ ಹೇರುವುದು ದುರಂತಕ್ಕೆ ದಾರಿಮಾಡಿಕೊಡುತ್ತದೆ.

ಹಾಗಾಗಿ ಸರ್ಕಾರದ ಮೂಲ ಉದ್ದೇಶ ನಗದುರಹಿತ ಆರ್ಥಿಕತೆ ಇರಬಾರದಿತ್ತು. ಚಳಿ ಜ್ವರ ಇರುವ ರೋಗಿಗೆ ಖೆಮೋಥೆರಪಿ ಮಾಡಿದಂತೆ ನರೇಂದ್ರ ಮೋದಿ ನಗದುರಹಿತ ಆರ್ಥಿಕತೆಗಾಗಿ ಅಮಾನ್ಯೀಕರಣ ಕ್ರಮ ಕೈಗೊಂಡಿದ್ದಾರೆ. ನಿಜ, ನಗದು ವಹಿವಾಟು ಕಡಿಮೆಯಾದಂತೆಲ್ಲಾ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ. ಆದರೆ ಈ ನೀತಿಯನ್ನು ಹಂತಹಂತವಾಗಿ ಜಾರಿಗೊಳಿಸಬೇಕಾಗುತ್ತದೆ. ಹಠಾತ್ ಅಮಾನ್ಯೀಕರಣ ಪ್ರಕ್ಷೋಭೆಗೆ ಎಡೆಮಾಡಿಕೊಡುತ್ತದೆ. ಮೋದಿ ಜಾರಿಗೊಳಿಸಿದ ಅಮಾನ್ಯೀಕರಣ ನೀತಿ ಪೂರ್ವ ನಿಯೋಜಿತವಾಗಿರಲಿಲ್ಲ. ಹಾಗಾಗಿ ಈ ಕ್ರಮದಿಂದ ಕಪ್ಪುಹಣವನ್ನು ನಿವಾರಿಸುವುದು ಅಸಾಧ್ಯವಾಗುತ್ತದೆ. ಒಂದೆಡೆ ಸರ್ಕಾರ ನಿರೀಕ್ಷಿಸಿದಷ್ಟು ಕಪ್ಪುಹಣವೂ ದೊರೆಯುವುದಿಲ್ಲ ; ಮತ್ತೊಂದೆಡೆ ದೇಶದ ದುಡಿಯುವ ವರ್ಗಗಳು, ಕೃಷಿಕರು ಮತ್ತು ದಿನಗೂಲಿ ನೌಕರರು ಬವಣೆ ಪಡುತ್ತಿದ್ದಾರೆ. ಈ ವೇಳೆಗಾಗಲೇ ಕಪ್ಪುಹಣದ ವಾರಸುದಾರರು ತಮ್ಮ ಅಕ್ರಮ ಸಂಪತ್ತನ್ನು ರಕ್ಷಿಸಲು ವಾಮಮಾರ್ಗಗಳನ್ನು ಅನುಸರಿಸಿರುವುದು ಸ್ಪಷ್ಟವಾಗಿದೆ.

ಈ ವಾಮಮಾರ್ಗಗಳನ್ನು ತಡೆಗಟ್ಟಲೆಂದೇ ಸರ್ಕಾರ ದೇಶಾದ್ಯಂತ ಆದಾಯ ತೆರಿಗೆ ಇಲಾಖೆಯ ಮೂಲಕ ದಾಳಿ ನಡೆಸುತ್ತಿದೆ. ಇದರಿಂದ ತೆರಿಗೆ ವಂಚಿಸುವವರು ಆತಂಕಕ್ಕೀಡಾದರೂ ಸರ್ಕಾರದ ನಿರೀಕ್ಷೆಯಂತೆ 4 ಲಕ್ಷ ಕೋಟಿ ರೂ ಸಂಗ್ರಹವಾಗುವುದು ಕನಸಿನ ಮಾತೇ ಸರಿ. ಅಮಾನ್ಯೀಕರಣದಿಂದ ದೇಶದಲ್ಲಿ ಹುದುಗಿರುವ ಕಪ್ಪುಹಣ ಎಲ್ಲವೂ ಹೊರಬರುತ್ತದೆ ಎಂಬ ಸರ್ಕಾರದ ನಿರೀಕ್ಷೆ ಹುಸಿಯಾಗುತ್ತಿದೆ. ಇತ್ತ ಆರ್ ಬಿ ಐ ಸರ್ಕಾರಕ್ಕೆ ಯಾವುದೇ ರೀತಿಯ ಉತ್ತಮ ಫಲಿತಾಂಶ ನೀಡಲಾಗುವುದಿಲ್ಲ. ಮತ್ತೊಂದೆಡೆ ಸರ್ಕಾರಕ್ಕೂ ಸಹ ಅಮಾನ್ಯೀಕರಣದಿಂದ ಉಂಟಾಗುವ ಉಪಯೋಗವನ್ನು ಅರ್ಥವ್ಯವಸ್ಥೆಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗುವುದಿಲ್ಲ. ಒಟ್ಟಾರೆ ಹೇಳುವುದಾದರೆ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಕಪ್ಪು ಹಣ ನಿಯಂತ್ರಣ ಕ್ರಮಗಳು ಕಳಪೆ ಯೋಜನೆ ಮತ್ತು ಹುಸಿ ಭರವಸೆಗಳಿಂದ ಸೊರಗುತ್ತವೆ. ಈ ಪ್ರಕ್ರಿಯೆಯಲ್ಲಿ ದೇಶದ ಜನಸಾಮಾನ್ಯರಿಗೆ ಅಪಾರ ಹಾನಿ ಉಂಟಾಗಿರುತ್ತದೆ. ಸಾಮಾನ್ಯ ಜನತೆ ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಂತೆ ಆರ್ಥಿಕತೆಯೂ ಕುಸಿಯುತ್ತದೆ. ಉತ್ಪಾದನೆಯೂ ಕುಂಠಿತವಾಗುತ್ತದೆ. ಇದರಿಂದ ಬಳಕೆಯ ಪ್ರಮಾಣವೂ ಕುಸಿದು ಆರ್ಥಿಕ ಬೆಳವಣಿಗೆಯೂ ಕುಂಠಿತವಾಗುತ್ತದೆ. ಈ ಬೆಳವಣಿಗೆಯನ್ನು ಅರಿತಿರುವ ನರೇಂದ್ರ ಮೋದಿ ಸರ್ಕಾರ ತನ್ನ ಮುಜುಗರವನ್ನು ಬಹಿರಂಗಪಡಿಸದೆ ಕಪ್ಪು ಹಣ ನಿಯಂತ್ರಣದ ಜಪ ಮಾಡುವುದನ್ನು ಬಿಟ್ಟು ಡಿಜಿಟಲ್ ಆರ್ಥಿಕತೆಯ ಭಜನೆ ಮಾಡುತ್ತಿದೆ. ಈ ಕುತಂತ್ರ ಬಿಜೆಪಿ ನಾಯಕರಿಗೆ ಆಕರ್ಷಕವಾಗಿ ಕಾಣಬಹುದು. ಆದರೆ ಭಾರತದ ಜನಸಾಮಾನ್ಯರು ಮತ್ತು ಮತದಾರರು ಸುಲಭವಾಗಿ ಬಲಿಯಾಗುವವರಲ್ಲ.