ನಗದು ಠೇವಣಿ : ಎಸ್ಕೆಡಿಸಿಸಿ ಬ್ಯಾಂಕಿನಿಂದ ಮಾಹಿತಿ ಕೋರಿದ ಜಾರಿ ನಿರ್ದೇಶನಾಲಯ

`ಎಲ್ಲಾ ಮಾಹಿತಿ ನೀಡಲಾಗಿದೆ, ನಮ್ಮ ಕಾರ್ಯನಿರ್ವಹಣೆ ಪಾರದರ್ಶಕ’ : ಅಧ್ಯಕ್ಷ ರಾಜೇಂದ್ರ ಕುಮಾರ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗದು ಠೇವಣಿ ಸಂಬಂಧ ಮಾಹಿತಿ ಕೋರಿ ಜಾರಿ ನಿರ್ದೇಶನಾಲಯದಿಂದ ನೊಟೀಸ್ ಪಡೆದ ಎಂಟು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‍ಸಿಡಿಸಿಸಿ ಬ್ಯಾಂಕ್) ಕೂಡ ಸೇರಿದೆ ಎಂದು ಮಾಹಿತಿ ನೀಡಿರುವ ಬ್ಯಾಂಕಿನ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್ “ನಮ್ಮ ಕಾರ್ಯನಿರ್ವಹಣೆ ಪಾರದರ್ಶಕವಾಗಿದ್ದು, ನಿರ್ದೇಶನಾಲಯ ಕೇಳಿದ ಎಲ್ಲಾ ಮಾಹಿತಿಗಳನ್ನೂ ನೀಡಲಾಗಿದೆ” ಎಂದು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.  ನಿರ್ದೇಶಕ ಎಚ್ ಪಿ ಸುಧಮ್ ದಾಸ್ ಡಿಸೆಂಬರ್ 22ರಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನೀಡಿದ ನೊಟೀಸಿನಲ್ಲಿ ನವೆಂಬರ್ 8 ಹಾಗೂ 15ರ ನಡುವೆ ಸಹಕಾರಿ ಸಂಘಗಳಲ್ಲಿ ರೂ 2.5 ಲಕ್ಷಕ್ಕೂ ಹೆಚ್ಚು ನಗದು ಠೇವಣಿ ಇರಿಸಿದ ಖಾತೆಗಳ ವಿವರಗಳನ್ನು ಸಲ್ಲಿಸುವಂತೆ ಕೇಳಿದ್ದಾರೆ. ಈ ಅವಧಿಯಲ್ಲಿ ರೂ 2.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ನೆಫ್ಟ್, ಆರ್ಟಿಜಿಎಸ್, ಚೆಕ್ ಅಥವಾ ಡಿಮಾಂಡ್ ಡ್ರಾಫ್ಟ್ ಮೂಲಕ ಪಡೆದವರ ವಿವರಗಳನ್ನೂ  ಹಾಗೂ ನವೆಂಬರ್ 8ರ ನಂತರ ಸಕ್ರಿಯಗೊಂಡ ಜನ ಧನ್ ಖಾತೆಗಳ ಮಾಹಿತಿಯನ್ನೂ  ನಿರ್ದೇಶನಾಲಯ ಕೇಳಿತ್ತು.

“ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಒಟ್ಟು ರೂ 17,500 ಕೋಟಿ ಠೇವಣಿಯಲ್ಲಿ ಶೇ 18ರಷ್ಟು ಅಂದರೆ ಅಂದಾಜು ರೂ 3,200 ಕೋಟಿ ರಾಜ್ಯ ಸಹಕಾರಿ ಬ್ಯಾಂಕುಗಳಲ್ಲಿದೆÉ. ನವೆಂಬರ್ 9 ಹಾಗೂ ನವೆಂಬರ್ 14ರ ನಡುವೆ ಒಟ್ಟು ರೂ 386.65 ಕೋಟಿ  ಮೊತ್ತದ ಠೇವಣಿಯು  1,100 ಪತ್ತಿನ ಸಹಕಾರಿ ಸಂಘಗಳು, ಅರ್ಬನ್ ಕೊ-ಆಪರೇಟಿವ್ ಬ್ಯಾಂಕುಗಳು, ನೇಕಾರರ ಸಹಕಾರಿ ಸಂಘಗಳು ಹಾಗೂ ಬ್ಯಾಂಕಿನ 101 ಶಾಖೆಗಳ ವಿವಿಧ ಉಳಿತಾಯ ಹಾಗೂ ಸಾಲದ ಖಾತೆಗಳ ಮುಖಾಂತರÀ ಬಂದಿದೆ” ಎಂದು ರಾಜೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

“ಇದರಲ್ಲಿ 1,080  ಠೇವಣಿಗಳು ರೂ 2.5 ಲಕ್ಷಕ್ಕೂ ಅಧಿಕವಾಗಿದ್ದು ಈ ನಿಟ್ಟಿನಲ್ಲಿ ಒಟ್ಟು ಠೇವಣಿ ಮೊತ್ತ ರೂ 249.4 ಕೋಟಿಯಷ್ಟಾಗಿದೆ” ಎಂದು ಅವರು ಹೇಳಿದ್ದಾರೆ.

“ಒಟ್ಟು 1,062 ಜನ ಧನ್ ಖಾತೆಗಳ ಪೈಕಿ  42 ಖಾತೆಗಳಲ್ಲಿ ರೂ 3.72 ಲಕ್ಷ ಮೊತ್ತ ಠೇವಣಿಯಿರಿಸಲಾಗಿದೆ” ಎಂದ ರಾಜೇಂದ್ರ ಕುಮಾರ್, ಈ ಎಲ್ಲಾ ಮಾಹಿತಿಗಳನ್ನು ನಿಯಮಿತವಾಗಿ ರಿಸರ್ವ್ ಬ್ಯಾಂಕ್ ಹಾಗೂ ಜಾರಿ ನಿರ್ದೇಶನಾಲಯಕ್ಕೆ ನೀಡಲಾಗುತ್ತಿದೆ ಎಂದಿದ್ದಾರೆ.