ನಗದು ಕೊರತೆ : ಬಿಜೆಪಿ ನಾಯಕರಲ್ಲಿ ಹೆಚ್ಚಿದ ಆತಂಕ

ಬ್ಯಾಂಕುಗಳ ಮುಂದೆ, ಎಟಿಎಂಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವ ಲಕ್ಷಾಂತರ ಜನರ ತಾಳ್ಮೆ ಕೊನೆಗೊಂಡಿದ್ದು ಆಕ್ರೋಶ ಹೊರಹೊಮ್ಮುತ್ತಿದೆ.

  • ರೂಪಮ್ ಜೈನ್

ನೋಟು ರದ್ದತಿಯನ್ನು ಘೋಷಿಸಿ ಐವತ್ತು ದಿನಗಳು ಕಳೆದರೂ ದೇಶದಲ್ಲಿ ನಗದು ಕೊರತೆ ಇನ್ನೂ ನೀಗದೆ ಇರುವುದು ಬಿಜೆಪಿ ನಾಯಕರಲ್ಲಿ ಮತ್ತು ಮಿತ್ರ ಪಕ್ಷಗಳ ಸಂಸದರಲ್ಲಿ ಆತಂಕ ಸೃಷ್ಟಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕೆಲವು ನಾಯಕರು ಮೋದಿ ನಿರ್ಣಯದಿಂದ ದೂರವೇ ಉಳಿದಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆಗಾಗಿ, ಭಯೋತ್ಪಾದನೆಗೆ ಕಪ್ಪುಹಣದ ರವಾನೆ ತಡೆಗಟ್ಟಲು ಮತ್ತು ದೇಶವನ್ನು ಡಿಜಿಟಲೀಕರಣದತ್ತ ಕೊಂಡೊಯ್ಯುವ ಉದ್ದೇಶದಿಂದ ಮೋದಿ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ್ದರು ಎಂದು ಬಿಜೆಪಿ ಸಮರ್ಥಿಸಿತ್ತು. ಅರ್ಥವ್ಯವಸ್ಥೆಯಲ್ಲಿ ಜಾರಿಯಲ್ಲಿದ್ದ ಸುಮಾರು 15 ಲಕ್ಷ ಕೋಟಿ ರೂ ರದ್ದುಪಡಿಸಲಾಗಿತ್ತು. ಡಿಸೆಂಬರ್ ಅಂತ್ಯದ ವೇಳೆಗೆ ಹೊಸ ನೋಟುಗಳು ಚಾಲ್ತಿಗೆ ಬರಲಿವೆ ಎಂದು ಆಶ್ವಾಸನೆ ನೀಡಿದ್ದರು.

ಆದರೆ ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಲ್ಲುವವರ ಸಂಖ್ಯೆ ಕಡಿಮೆಯಾಗಿಲ್ಲ. ದೇಶದ ಅರ್ಥವ್ಯವಸ್ಥ ಕುಸಿತ ಕಂಡಿದೆ. ಭಾರತದಲ್ಲಿ ಶೇ 90ರಷ್ಟು ವಹಿವಾಟು ನಗದು ರೂಪದಲ್ಲೇ ನಡೆಯುತ್ತಿತ್ತು. ಮೋದಿಯ ಬಿಜೆಪಿ ಮತ್ತು ಪಿತೃ ಸಂಸ್ಥೆ ಆರೆಸ್ಸೆಸ್ಸಿನ ಆರು ನಾಯಕರೊಡನೆ ನಡೆಸಲಾಗಿರುವ ಸಂದರ್ಶನವೊಂದರ ಪ್ರಕಾರ ನಗದು ಕೊರತೆಯಿಂದ ದೇಶದಲ್ಲಿ ಹಾಹಾಕಾರ ಉಂಟಾಗಿದ್ದು ಹಲವು ವಿಧಾನಸಭಾ ಚುನಾವಣೆಗಳಲ್ಲಿ ಇದು ಪಕ್ಷಕ್ಕೆ ಹಿನ್ನಡೆ ಉಂಟುಮಾಡಲಿದೆ.

ಮೋದಿ ಸರ್ಕಾರದ ನಿರ್ಣಯದ ಉದ್ದೇಶ ಉತ್ತಮವಾಗಿದ್ದರೂ ಅನುಷ್ಠಾನ ಸಮರ್ಪಕವಾಗಿಲ್ಲ ಎಂಬ ಅಭಿಪ್ರಾಯ ದಟ್ಟವಾಗಿದ್ದು ಹಲವಾರು ಬಿಜೆಪಿ ಸಂಸದರು ಈ ಅಭಿಪ್ರಾಯಕ್ಕೆ ತಮ್ಮ ಅನುಮೋದನೆ ನೀಡಿದ್ದಾರೆ.

`ಆಲ್ ಈಸ್ ವೆಲ್’ ಎಂದು ಜನರನ್ನು ಸಮಧಾನಪಡಿಸುವುದು ಕಷ್ಟದ ಕೆಲಸ ಎಂದು ಉತ್ತರಪ್ರದೇಶದ ಉಸ್ತುವಾರಿ ನಾಯಕ ಮತ್ತು ಕೇಂದ್ರ ಸಚಿವ ಸಂತೋಷ್ ಗಾಂಗ್ವರ್ ಹೇಳುತ್ತಾರೆ. ಚುನಾವಣಾ ಪ್ರಸಾರದ ಸಂದರ್ಭದಲ್ಲಿ ಮತದಾರರನ್ನು ಓಲೈಸುವುದಿರಲಿ, ಮೋದಿಯ ಅರ್ಥಕ್ರಾಂತಿಯಿಂದ ಭವಿಷ್ಯ ಉತ್ತಮವಾಗುತ್ತದೆ ಎಂದು ಜನರಿಗೆ ಮನದಟ್ಟು ಮಾಡುವುದೇ ಕಷ್ಟದ ಕೆಲಸವಾಗಿದ್ದು ಪ್ರತಿಯೊಬ್ಬ ಅಭ್ಯರ್ಥಿಯೂ ಒತ್ತಡದಲ್ಲಿದ್ದಾರೆ ಎನ್ನುತ್ತಾರೆ ಸಂತೋಷ್ ಗಾಂಗ್ವರ್.

ಆದರೆ ಈ ತಾತ್ಕಾಲಿಕ ಹಿನ್ನಡೆಯ ಹೊರತಾಗಿಯೂ ಮೋದಿಗೆ ಜನಸಾಮಾನ್ಯರ ಬೆಂಬಲ ಇರುವುದರಿಂದ ಪಕ್ಷ ಚುನಾವಣೆಗಳಲ್ಲಿ ಯಶಸ್ಸು ಸಾಧಿಸುತ್ತದೆ ಎಂದು ಬಿಜೆಪಿ ವಕ್ತಾರ ಜಿ ವಿ ಎಲ್ ನರಸಿಂಹರಾವ್ ಹೇಳುತ್ತಾರೆ. ಪಕ್ಷದ ಕಾರ್ಯಕರ್ತರು ಉತ್ಸಾಹದಿಂದಿರುವುದನ್ನೂ ರಾವ್ ಉಲ್ಲೇಖಿಸುತ್ತಾರೆ. ಬಿಜೆಪಿಯಲ್ಲೇ ತಳಮಳ ಉಂಟಾಗಿರುವುದರಿಂದ ಮೋದಿಯ ನೋಟು ರದ್ದತಿ ನೀತಿಯ ಯಶಸ್ಸು ಮತ್ತು ಬಿಜೆಪಿಯ ರಾಜಕೀಯ ಭವಿಷ್ಯ ತೂಗುಯ್ಯಾಲಯಲ್ಲಿದೆ.

ಉತ್ತರ ಪ್ರದೇಶದಲ್ಲಿ ಇದು ಕೇಂದ್ರ ವಿಚಾರವಾಗಿದ್ದು, ಇತರ ವಿರೋಧ ಪಕ್ಷಗಳೊಡನೆ ಕೈಜೋಡಿಸಿರುವ ಕಾಂಗ್ರೆಸ್ ಅಮಾನ್ಯೀಕರಣದಿಂದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಪ್ರಚಾರ ಮಾಡುವಲ್ಲಿ ಯಶಸ್ವಿಯಾಗಿದೆ.

ಈ ಕ್ರಮ ಕೈಗೊಳ್ಳುವ ಮುನ್ನ ತಳಮಟ್ಟದಲ್ಲಿ ಸಾಕಷ್ಟು ಸಿದ್ಧತೆಗಳನ್ನು ನಡೆಸಿ, ನೋಟು ಮುದ್ರಣಮಾಡಲು ಎರಡು ಹೊಸ ಘಟಕಗಳನ್ನು ಆರಂಭಿಸಲು ತಾವು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದರೂ ಈ ಸಲಹೆಯನ್ನು ನಿರ್ಲಕ್ಷಿಸಿ ಮೋದಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ಹೇಳುವ ಆರೆಸ್ಸೆಸ್ಸಿನ ಹಿರಿಯ ಅಧಿಕಾರಿಯೊಬ್ಬರು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ವೈಫಲ್ಯಕ್ಕೂ ಸ್ವತಃ ಮೋದಿಯೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕೆಲವು ದಿನಗಳ ಮುನ್ನ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೋದಿಯ ನೋಟು ರದ್ದತಿಯ ನೀತಿಯನ್ನು ಖಂಡಿಸುವ ಮೂಲಕ ಬಿಜೆಪಿಯಿಂದ ತಾತ್ವಿಕವಾಗಿ ದೂರ ಸರಿದಿದ್ದಾರೆ.  ಮೋದಿ ಮತ್ತು ಸಂಪುಟ ಸಚಿವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ನೀತಿಯಿಂದ ದೇಶದ ಆರ್ಥಿಕತೆಗೆ ಉತ್ತೇಜನ ದೊರೆಯುತ್ತದೆ, ದೀರ್ಘಕಾಲದ ಲಾಭವಾಗುತ್ತದೆ ಎಂದು ಹೇಳುವ ಮೋದಿ ದೇಶದಲ್ಲಿನ ಪರ್ಯಾಯ ಆರ್ಥಿಕತೆಯನ್ನು ಹೋಗಲಾಡಿಸಿದ ಮುಕ್ತ ಅರ್ಥವ್ಯವಸ್ಥೆ ಉಂಟಾಗುತ್ತದೆ ಎಂದು ಭರವಸೆ ನೀಡುತ್ತಾರೆ.

ಮೋದಿಯ ನಿರ್ಧಾರಕ್ಕೆ ಆರಂಭದಲ್ಲಿ ಜನಸಾಮಾನ್ಯರು ಸ್ಪಂದಿಸಿದ್ದರು, ಅಭೂತಪೂರ್ವ ಬೆಂಬಲವನ್ನೂ ನೀಡಿದ್ದರು. ಅಕ್ರಮ ಸಂಪತ್ತಿನ ಒಡೆಯರು, ಕಪ್ಪುಹಣದ ವಾರಸುದಾರರು ತಮ್ಮ ಅಕ್ರಮ ಆದಾಯವನ್ನು ದೇಶದ ಒಳಿತಿಗಾಗಿ ಸಮರ್ಪಿಸಲು ಈ ಕ್ರಮ ನೆರವಾಗುವುದೇ ಆದರೆ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಳ್ಳಲು ಜನತೆ ಸಿದ್ಧವಾಗಿದ್ದರು. ಆದರೆ ಬ್ಯಾಂಕುಗಳ ಮುಂದೆ, ಎಟಿಎಂಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವ ಲಕ್ಷಾಂತರ ಜನರ ತಾಳ್ಮೆ ಕೊನೆಗೊಂಡಿದ್ದು ಆಕ್ರೋಶ ಹೊರಹೊಮ್ಮುತ್ತಿದೆ. ಕಳೆದ ವಾರ ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯದ ಹಲವಾರು ಬಿಜೆಪಿ ಶಾಸಕರು ಮತ್ತು ಸಂಸದರು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಿ ಹೆಚ್ಚುವರಿ ನಗದು ಪೂರೈಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸ್ಥಳೀಯ ಜನತೆಗೆ, ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಮತ್ತು ಜನಸಾಮಾನ್ಯರಿಗೆ ನಗದು ಕೊರತೆಯಿಂದ ತೊಂದರೆಯಾಗುತ್ತಿದ್ದು ಇದರಿಂದ ಪಕ್ಷದ ಭವಿಷ್ಯಕ್ಕೆ ಕುಂದು ಬರುತ್ತದೆ ಎಂದು ಎಚ್ಚರಿಸಿದ್ದಾರೆ.