ನಗದು ಬಿಕ್ಕಟ್ಟು ಬಗೆಹರಿಸಲು ಕರೆನ್ಸಿ ಮುದ್ರಣಾಲಯಗಳಲ್ಲಿ 3 ಪಾಳಿ ಕೆಲಸ

ನವದೆಹಲಿ/ಮುಂಬೈ/ಚೆನ್ನೈ : ಬ್ಯಾಂಕು ಶಾಖೆಗಳಲ್ಲಿ ನಗದು ಬಿಕ್ಕಟ್ಟು ಈಗಲೂ ಮುಂದುವರಿದಿದ್ದು, ನಗದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟು 500 ರೂ ಹೊಸ ನೋಟುಗಳ ಬಿಡುಗಡೆಗೊಳಿಸಲು ಕ್ರಮ ಕೈಗೊಂಡಿದೆ. ಪರಿಣಾಮ, ಮುಂದಿನ ಕೆಲವು ದಿನಗಳಲ್ಲಿ ಪ್ರಸಕ್ತ ಕರೆನ್ಸಿ ಬಿಗುವಿನ ಪರಿಸ್ಥಿತಿ ಕಡಿಮೆಯಾಗಲಿದೆ. ದೇಶಾದ್ಯಂತದ ಬ್ಯಾಂಕುಗಳಲ್ಲಿ ನಗದು ಕೊರತೆ ಉಂಟಾಗಿದ್ದು, ಬುಧವಾರ ಬೆಳಿಗ್ಗೆಯೇ ಬಹುತೇಕ ಹಣ ಖಾಲಿಯಾಗಿತ್ತು.

ಆರ್ ಬಿ ಐ ಸ್ವಾಮ್ಯದ ಮೈಸೂರು ಮತ್ತು ಸಾಲ್ಬೋನಿ ಮತ್ತು ಸರ್ಕಾರ ಸ್ವಾಮ್ಯದ ನಾಸಿಕ್ ಮತ್ತು ದೇವಸ್ ಪ್ರೆಸ್ಸುಗಳಲ್ಲಿ ಎರಡರ ಬದಲಿಗೆ ಈಗ ಮೂರು ಪಾಳಿಯಲ್ಲಿ ಕೆಲಸ ನಡೆಯುತ್ತಿದೆ. ಎಲ್ಲ ಪ್ರೆಸ್ಸುಗಳಲ್ಲಿ 500 ರೂ ನೋಟುಗಳ ಮುದ್ರಣಕ್ಕಾಗಿ ಆದ್ಯತೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಹೆಚ್ಚಿನ ಎಟಿಎಂಗಳಲ್ಲಿ ಬುಧವಾರದಂದೂ ಸಾಲುದ್ದ ಸರತಿ ಕಂಡು ಬಂದಿತ್ತು. ಕೆಲವು ಎಟಿಎಂಗಳು ಮಧ್ಯಾಹ್ನದ ಹೊತ್ತಿಗೆ ಮುಚ್ಚಿದ್ದವು. ತಿಂಗಳ ಕೊನೆಗೆ ಸರ್ಕಾರಿ ಸಿಬ್ಬಂದಿಗೆ ವೇತನ ನೀಡಬೇಕಾಗಿರುವುದರಿಂದ ನಿನ್ನೆಯಿಂದ ನಗದು ಸಮಸ್ಯೆ ಹೆಚ್ಚಿದೆ. ರಾಜ್ಯ ಸ್ವಾಮ್ಯದ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಖಾಸಗಿ ಕಂಪೆನಿಗಳಿಗೂ ವೇತನ ನೀಡುವಲ್ಲಿ ಸಮಸ್ಯೆ ಉಂಟಾಗಿದೆ.