…. ಹೊಸ ವರ್ಷಕ್ಕೂ ತಟ್ಟಲಿದೆ ನಗದು ಕೊರತೆಯ ಬಿಸಿ

ನವದೆಹಲಿ : ನೋಟು ಅಮಾನ್ಯೀಕರಣದಿಂದ ಸಾರ್ವಜನಿಕರಿಗುಂಟಾಗುತ್ತಿರುವ ಅನಾನುಕೂಲತೆಗಳೆಲ್ಲವೂ ಡಿಸೆಂಬರ್ 30ರೊಳಗಾಗಿ ಪರಿಹಾರವಾಗುವುದೆಂದು ಯೋಜನೆ ಜಾರಿಗೊಳಿಸಿದಾಗ ಸರಕಾರ ಹೇಳಿಕೊಂಡಿದ್ದರೂ ಬ್ಯಾಂಕುಗಳಿಂದ ಹಾಗೂ ಎಟಿಎಂಗಳಿಂದ ಹಿಂಪಡೆಯಬಹುದಾದ ನಗದು ಮಿತಿ ಈ ತಾರೀಕಿನಾಚೆಗೆ ಹೊಸ ವರ್ಷದಲ್ಲಿಯೂ ಮುಂದುವರಿಯಬಹುದೆಂದು ಬ್ಯಾಂಕ್ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. ಹೆಚ್ಚುತ್ತಿರುವ ನಗದು ಹಣದ ಬೇಡಿಕೆಗನುಗುಣವಾಗಿ ನೋಟು ಮುದ್ರಣಾಲಯಗಳು ಹಾಗೂ ರಿಸರ್ವ್ ಬ್ಯಾಂಕ್ ಹೊಸ ನೋಟುಗಳನ್ನು ಚಲಾವಣೆಗೆ ತರಲು ವಿಫಲವಾಗಿರುವುದೇ ಇದಕ್ಕೆ ಕಾಣವೆನ್ನಲಾಗಿದೆ.

ಪ್ರಸಕ್ತ ವಾರದಲ್ಲಿ ವ್ಯಕ್ತಿಯೊಬ್ಬ ಬ್ಯಾಂಕಿನ ಮೂಲಕ ತನ್ನ ಖಾತೆಯಿಂದ ರೂ 24,000 ತನಕ ಹಣ ಹಿಂಪಡೆಯಬಹುದಾಗಿದ್ದರೂ ಹಲವಾರು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ವಾರವೊಂದಕ್ಕೆ ಈ ಮೊತ್ತವನ್ನು ನೀಡಲು ಶಕ್ಯವಾಗಿಲ್ಲ. ಒಂದು ವೇಳೆ ಈ ನಗದು ಮಿತಿಯನ್ನು ಸರಕಾರ ಜನವರಿ 2ರಿಂದ ಹಿಂದೆಗೆದುಕೊಂಡರೂ ಬ್ಯಾಂಕುಗಳಿಗೆ ತಮ್ಮ ಗ್ರಾಹಕರ ನಗದು ಬೇಡಿಕೆಗಳನ್ನ ಪೂರೈಸಲು ಅಸಾಧ್ಯವಾಗಲಿದೆಯೆನ್ನಲಾಗಿದೆ. ಸಾಕಷ್ಟು ನಗದು ಹಣದ ಅಗತ್ಯವಿರುವ ಸಣ್ಣ ಹಾಗೂ ವiಧ್ಯಮ ಕೈಗಾರಿಕೆಗಳು ಹಾಗೂ ಕಾರ್ಪೊರೇಟ್ ಕಂಪೆನಿಗಳ ಅಗತ್ಯವನ್ನೂ ಸದ್ಯ ಈಡೇರಿಸುವ ಸ್ಥಿತಿಯಲ್ಲಿ ಬ್ಯಾಂಕುಗಳು ಇಲ್ಲವಾಗಿವೆ.

ಬ್ಯಾಂಕುಗಳಿಗೆ ಸಾಕಷ್ಟು ನಗದು ಪೂರೈಕೆಯಾಗದ ಹೊರತು ನಗದು ಹಿಂಪಡೆಯುವ ಮಿತಿಯನ್ನು ಸಂಪೂರ್ಣವಾಗಿ ಕೈಬಿಡಲು ಸಾಧ್ಯವಿಲ್ಲವೆಂದು ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದರು.