ಬಿಪಿಎಲ್ ಕಾರ್ಡುದಾರರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಧಾನ್ಯದ ಬದಲು ಕೂಪನ್

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳ ಬದಲಿಗೆ ಕ್ಯಾಶ್ ಕೂಪನುಗಳನ್ನು ವಿತರಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತ ಪ್ರಸ್ತಾವನೆಯನ್ನು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸರ್ಕಾರದ ಮುಂದಿಟ್ಟಿದ್ದು, ಅನುಮತಿಗಾಗಿ ಕಾಯುತ್ತಿದೆ.

ಈ ಕುರಿತು ಮಾತನಾಡಿದ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಯು ಟಿ ಖಾದರ್, “ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಕ್ಯಾಶ್ ಕೂಪನ್ ಬಳಸಿ ಆಹಾರ ಧಾನ್ಯ ಖರೀದಿಗೆ ಕೆಲವು ಅಂಗಡಿಗಳನ್ನು ಸೂಚಿಸಲಾಗುವುದು. ಹೀಗೆ ಸೂಚಿಸಿದ ಅಂಗಡಿಗಳಲ್ಲಿ ಮಾತ್ರ ಕಾರ್ಡುದಾರರು ಆಹಾರಧಾನ್ಯ ಪಡೆಯಬಹುದು” ಎಂದರು.

“ಇದೊಂದು ಮಹತ್ವದ ಯೋಜನೆ, ಆದರೆ ಇನ್ನೂ ಕೂಡ ಪ್ರಸ್ತಾವನೆ ಅಂತಿಮ ರೂಪ ಪಡೆದಿಲ್ಲ. ಈ ಯೋಜನೆ ಜಾರಿಗೆ ನಾವು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ಈ ಯೋಜನೆ ಪಿಡಿಎಸ್ ವ್ಯವಸ್ಥೆಯ ದುರುಪಯೋಗವಾಗುವುದನ್ನು ತಡೆಗಟ್ಟಲು ಸಹಾಯವಾಗುತ್ತದೆ. ಆದರೆ ಇದು ಕೇವಲ ಆಯ್ಕೆ ಮಾತ್ರ ಕಡ್ಡಾಯವಲ್ಲ” ಎಂದು ಸ್ಪಷ್ಟಪಡಿಸಿದರು.

“ಇಲಾಖೆಯು ನ್ಯಾಯಬೆಲೆ ಅಂಗಡಿಗಳನ್ನು ಪಡಿತರ ಚೀಟಿಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಪರಿಚಯಿಸುವ ಸೇವಾ ಕೇಂದ್ರಗಳಾಗಿ ಬದಲಾಯಿಸುವ ಚಿಂತನೆಯಲ್ಲಿದೆ. ಮೊದಲ ಹಂತದಲ್ಲಿ ಬಿಪಿಎಲ್ ಕಾರ್ಡುದಾರರ ಆಹಾರಧಾನ್ಯ ಕೂಪನ್ ಸಂಗ್ರಹಕ್ಕೆ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು. ಆಹಾರಧಾನ್ಯ ಕೂಪನುಗಳನ್ನು ಪ್ರಕಟಿಸುವ ಹಕ್ಕುಗಳನ್ನು ನ್ಯಾಯ ಬೆಲೆ ಅಂಗಡಿ ವ್ಯಾಪಾರಿಗಳಿಗೆ ನೀಡಲಾಗುವುದು, ಪಡಿತರ ಚೀಟಿದಾರರ ಹೆಬ್ಬೆರಳು ಗುರುತು ಇಲ್ಲಿ ಪ್ರಾಮುಖ್ಯ. ಪ್ರಸಕ್ತ ಆಹಾರಧಾನ್ಯಗಳ ಕೂಪನುಗಳನ್ನು ಗ್ರಾಮ ಪಂಚಾಯತುಗಳ ಎಸ್ ಎಂ ಎಸ್ ಮುಖಾಂತರ ಮತ್ತು ಮಂಗಳೂರು ಒನ್ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ. ಹೊಸ ಯೋಜನೆಯಡಿಯಲ್ಲಿ ಕಾರ್ಡುದಾರರು ಕೂಪನುಗಳನ್ನು ಮತ್ತು ಆಹಾರಧಾನ್ಯಗಳನ್ನು ನೇರವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆಯಬಹುದು. ನ್ಯಾಯಬೆಲೆ ಅಂಗಡಿಗಳಿಗೆ ಸಾಫ್ಟವೇರ್ ಒದಗಿಸುವ ಸಂದರ್ಭ ಕಂಪ್ಯೂಟರ್, ಪ್ರಿಂಟರ್ ಮತ್ತು ಬಯೋಮೆಟ್ರಿಕ್ ಯಂತ್ರವನ್ನು ಹೊಂದಲಿವೆ, ಇದೇ ವೇಳೆ ಪಡಿತರ ಚೀಟಿಗಳಲ್ಲಿರುವ ಲೋಪದೋಷಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿಯೇ ಸರಿಪಡಿಸಿಕೊಳ್ಳಬಹುದು” ಎಂದು ಖಾದರ್ ಹೇಳಿದರು.