ಅಕ್ರಮ ಕಟ್ಟಡ ವಿರುದ್ಧ ಕೇಸು ದಾಖಲಿಸಿದ್ದ ಬಾಳಿಗಾ

ಶಾರದಾ ವಿದ್ಯಾಲಯ ವಿರುದ್ಧ ಕೇಸಿನ
ವಿಚಾರಣೆ ಜ 27ಕ್ಕೆ ಮುಂದೂಡಿಕೆ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ನಗರದಲ್ಲಿ ಕೊಲೆಯಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಅವರು ಶಾರದಾ ವಿದ್ಯಾಲಯವಿರುವ ಕಟ್ಟಡ ಮಾಲೀಕರ ವಿರುದ್ಧ ದಾಖಲಿಸಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜ 27ಕ್ಕೆ ಮುಂದೂಡಿದೆ.
ಪ್ರತಿವಾದಿಗಳು ಕೋರ್ಟಿನಿಂದ ದಿನಾಂಕ ಪಡೆದುಕೊಂಡು ಪ್ರಕರಣದ ವಿಚಾರಣೆಯನ್ನು ದುರುದ್ದೇಶದಿಂದ ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ದೂರುದಾರರು ಶುಕ್ರವಾರ ನಡೆದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಬಿನ್ನವಿಸಿದ್ದಾರೆ.
ನರೇಶ್ ಶೆಣೈ ಮತ್ತು ತಂಡದವರು ವಿನಾಯಕ ಬಾಳಿಗಾ ಹತ್ಯೆ ನಡೆಸಿದ ಅನಂತರ ಪ್ರಕರಣದ ದೂರುದಾರರಾಗಿ ವಿನಾಯಕ ಬಾಳಿಗಾ ಅವರ ಸಹೋದರಿ ಹರ್ಷಾ ಮತ್ತು ವಿಚಾರವಾದಿ ನರೇಂದ್ರ ನಾಯಕ್ ಹೋರಾಟ ನಡೆಸುತ್ತಿದ್ದಾರೆ.
ಸೌತ್ ಕೆನರಾ ದ್ರಾವಿಡ ಬ್ರಾಹ್ಮಿನ್ಸ್ ಅಸೋಸಿಯೇನ್ ಅವರು ನಗರದ ಕೊಡಿಯಾಲಬೈಲ್ ಸಮೀಪ ಕಟ್ಟಡ ಕಟ್ಟಲು ಮಹಾನಗರಪಾಲಿಕೆಯಿಂದ ಅನುಮತಿ ಪಡೆದು ಪಾಲಿಕೆ ನೀಡಿದ ಅನುಮತಿಗಿಂತ ಎರಡು ಪಟ್ಟು ದೊಡ್ಡ ಕಟ್ಟಡ ನಿರ್ಮಿಸಿ ಅಕ್ರಮವೆಸಗಿರುವುದು ಮಾಹಿತಿ ಹಕ್ಕು ಅರ್ಜಿ ಮೂಲಕ ವಿನಾಯಕ ಬಾಳಿಗಾ ಅವರ ಗಮನಕ್ಕೆ ಬಂದಿತ್ತು.
ಬಾಳಿಗಾ ಅವರು 2012ರಲ್ಲೇ ಅಕ್ರಮ ಕಟ್ಟಡ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾನಗರಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ಪಾಲಿಕೆ ಆಯುಕ್ತರು ಕಟ್ಟಡ ಮಾಲೀಕರಿಗೆ ನೋಟೀಸ್ ಜಾರಿ ಕಾನೂನು ಕ್ರಮಕೈಗೊಳ್ಳಲು ಮುಂದಾಗಿದ್ದರೂ ಅಂದು ಆಡಳಿತದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಹಸ್ತಕ್ಷೇಪದಿಂದ ಹೆಚ್ಚೇನೂ ಕ್ರಮ ಕೈಗೊಳ್ಳಲು ಆಯುಕ್ತರಿಗೆ ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ವಿನಾಯಕ ಬಾಳಿಗಾ ಅವರು ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಿದ್ದರು. 2016 ಮಾರ್ಚ್ 24ರಂದು ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಳಿಗಾ ಹಾಜರಾಗಲಿಲ್ಲ. ವಿನಾಯಕ ಬಾಳಿಗಾ ಅವರನ್ನು ಅವರ ಮನೆಯ ಮುಂದೆಯೇ ದುಷ್ಕರ್ಮಿಗಳು ಕೊಂದು ಹಾಕಿದ್ದರು.
ಬಾಳಿಗಾ ಅವರ ಸಾವಿಗೂ ಮುನ್ನ ಪ್ರಕರಣವನ್ನು ಹಲವು ಬಾರಿ ಮುಂದೂಡಿ ವಿಳಂಬ ಮಾಡಲಾಗಿತ್ತು. ದೂರು ನೀಡಿದವರು ವಿಳಂಬಕ್ಕಾಗಿ ನಿರಾಶೆಗೊಂಡು ಪ್ರಕರಣ ಕೈಬಿಡಬಹುದು ಎಂದೆನಿಸಿರಬಹುದು. ಬಾಳಿಗಾ ಅವರ ಕೊಲೆಯ ಅನಂತರ ಪ್ರಕರಣವನ್ನು ಮುನ್ನಡೆಸುವವರು ಇಲ್ಲ ಎನ್ನಲಾಗಿತ್ತು. ಆದರೆ, ಬಾಳಿಗಾ ಸಹೋದರಿ ಮತ್ತು ನರೇಂದ್ರ ನಾಯಕ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪ್ರಕರಣ ಮುನ್ನಡೆಸುತ್ತಿದ್ದಾರೆ.
ಮಂಗಳೂರು ಮಹಾನಗರಪಾಲಿಕೆಯು ಮೂರು ಮಹಡಿಗಳ ಕೇವಲ 970 ಚದರ ಅಡ ವಿಸ್ತೀರ್ಣದ ಕಟ್ಟಡ ನಿರ್ಮಿಸಲು ಅನುಮತಿ ನೀಡಿದ್ದರು. ಆದರೆ, ಸಂಬಂಧಪಟ್ಟವರು ಆರು ಮಹಡಿಗಳ 2015 ಚದರ ಅಡಿ ವಸ್ತೀರ್ಣದ ಕಟ್ಟಡ ನಿರ್ಮಿಸುವ ಮೂಲಕ ಕಾನೂನನ್ನು ಸಂಪೂರ್ಣ ಗಾಳಿಗೆ ತೂರಿದ್ದರು. ಪಾಲಿಕೆ ಅನುಮತಿ ನೀಡಿರುವುದಕ್ಕಿಂತ ದುಪ್ಪಟ್ಟು ವಿಸ್ತೀರ್ಣದ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಬಾಳಿಗಾ ನ್ಯಾಯಾಲಯದ ಮೊರೆ ಹೋಗಿದ್ದರು.
ಸರಕಾರ ಪ್ರಕಟಣೆ ಮಾಡಿರುವ ಅಕ್ರಮ ಸಕ್ರಮ ಅಡಿಯಲ್ಲಿ ಕೂಡ ಈ ಕಟ್ಟಡಕ್ಕೆ ದಂಡ ವಿಧಿಸಿ ವಿನಾಯಿತು ಪಡೆಯುವ ಅವಕಾಶ ಇಲ್ಲ ಎನ್ನಲಾಗಿದೆ. ಸರಕಾರದ ಪ್ರಕಾರ ವಸತಿ ಕಟ್ಟಡವಾದರೆ ಶೇಕಡ 50ರಷ್ಟು ಅಕ್ರಮ ಆಗಿದ್ದರೆ ವಿನಾಯಿತಿ ಇದೆ. ಇನ್ನುಳಿದ ಕಟ್ಟಡಗಳಿಗೆ ಶೇಕಡ 25ರ ತನಕ ವಿನಾಯತಿ ನೀಡಲಾಗುವುದು ಎಂದು ಸರಕಾರ ಪ್ರಕಟಿಸಿದೆ. ಆದರೆ, ಈ ಪ್ರಕರಣದಲ್ಲಿ ನೂರಕ್ಕೆ ನೂರು ಅಕ್ರಮ ಆಗಿದ್ದು, ವಿನಾಯಿತಿ ದೊರೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.