ತಾಯಿ, ಮಗಳಿಗೆ ಹಲ್ಲೆಗೈದ ಸಂಬಂಧಿಗಳ ವಿರುದ್ಧ ಕೇಸು

ಹಲ್ಲೆಗೊಳಗಾದ ತಾಯಿ, ಮಗಳು ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಉದ್ಯಾವರ ಬೊಳ್ಜೆಯಲ್ಲಿ ಘಟನೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಜಾಗದ ವಿಚಾರದಲ್ಲಿ ಮನಸ್ತಾಪ ಹೊಂದಿದ ವಿಚಾರವಾಗಿ ಭಿನ್ನಚೇತನೆ ತಾಯಿ ಹಾಗೂ ಆಕೆಯ ಮಗಳು ವಾಸಿಸುತ್ತಿದ್ದ ಮನೆಯ ಕೋಣೆಗೆ ನುಗ್ಗಿ ಯುವಕನೊಬ್ಬ ತಾಯಿ, ಮಗಳ ಕತ್ತನ್ನು ಹಿಸುಕಿ ಕಾಲಿಂದ ಮಾರಣಾಂತಿಕವಾಗಿ ಒದ್ದು, ಹತ್ಯೆಗೆ ಯತ್ನಿಸಿದ್ದು, ಆರೋಪಿಗೆ ಮತ್ತೊಬ್ಬ ವ್ಯಕ್ತಿ ಸಹಕರಿಸಿದ್ದಾರೆ ಎಂಬುದಾಗಿ ಘಟನೆಯಿಂದ ಗಾಯಗೊಂಡು ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಶಕುಂತಳಾ ಕಾಪು ಪೊಲೀಸರಿಗೆ ನೀಡಿದ ಹೇಳಿಕೆಯಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಉದ್ಯಾವರ ಬೊಳ್ಜೆ ನಿವಾಸಿಗಳಾದ ಶಂಕುಂತಳಾ (45) ಹಾಗೂ ಅವರ ಮಗಳು ಚೈತ್ರ ಸುವರ್ಣ (21). ಮನೆಗೆ ಅಕ್ರಮವಾಗಿ ನುಗ್ಗಿ ತಾಯಿ ಮಗಳಿಗೆ ಗಂಭೀರ ಹಲ್ಲೆ ನಡೆಸಿದ ಆರೋಪಿ ಉದ್ಯಾವರ ಬೊಳ್ಜೆ ನಿವಾಸಿ ರೈಲ್ವೇ ಉದ್ಯೋಗಿ ಶಿವಾನಂದ (34) ಹಾಗೂ ಆತನ ಸಂಬಂಧಿ ನಿವೃತ್ತ ಸರ್ಕಾರಿ ಉದ್ಯೋಗಿ ಸಂಜೀವ ಎಸ್ ಪೂಜಾರಿ (60).

ಈ ಇಬ್ಬರು ಆರೋಪಿಗಳು ಕಳೆದ ಮಂಗಳವಾರ ತಮ್ಮ ಸಂಬಂಧಿಗಳೇ ಆದ ತಾಯಿ, ಮಗಳಿದ್ದ ಕೋಣೆಗೆ ನುಗ್ಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಸಂಜೀವ ಪೂಜಾರಿ ಮಹಿಳೆಯ ಕೈ ಹಿಡಿದು ಎಳೆದಾಡಿದರೆ ಶಿವಾನಂದ ತಾಯಿ ಮಗಳ ಕತ್ತನ್ನು ಒತ್ತಿ ಹಿಡಿದು ಕಾಲಿಂದ ಒದ್ದು ಹತ್ಯೆಗೆ ಯತ್ನಿಸಿದ್ದು, ಆ ಸಂದರ್ಭ ತಾಯಿ, ಮಗಳ ಬೊಬ್ಬೆ ಕೇಳಿ ಸ್ಥಳೀಯರು ಬರುತ್ತಿದಂತೆ ಜೀವ ಬೆದರಿಕೆಯೊಡ್ಡಿ ಹೊರಹೋಗಿದ್ದಾರೆ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.

“ಆರೋಪಿಗಳ ಇಂತಹ ಹೇಯಕೃತ್ಯ ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿ ಹದಿನೈದಕ್ಕೂ ಅಧಿಕ ಬಾರಿ ಹಲ್ಲೆಗೆ ಮುಂದಾಗಿದ್ದ ಬಗ್ಗೆ ಕಾಪು ಠಾಣೆಗೆ ದೂರು ನೀಡಿದ್ದು, ಪೊಲೀಸರು ನಾವು ಸಂಬಂಧಿಗಳು ಎಂಬ ಕಾರಣಕ್ಕೆ ಎರಡೂ ತಂಡವನ್ನು ಠಾಣೆಗೆ ಕರೆದು ಮಾತುಕತೆಯ ಮೂಲಕ ಇತ್ಯರ್ಥಗೊಳಿಸಿ ಆರೋಪಿಯಿಂದ ಮುಚ್ಚಳಿಕೆ ಬರೆಯಿಸಿ ಬಿಡುತ್ತಿದ್ದು, ಆದರೆ ಆತ ಠಾಣೆಯಲ್ಲಿ ಬರೆದು ಕೊಟ್ಟಂತೆ ನಡೆಯದೆ ಮತ್ತದೇ ಚಾಳಿ ಮುಂದುವರಿಸಿ ನಿರಂತರವಾಗಿ ಗಂಡು ದಿಕ್ಕಿಲ್ಲದ ನಮಗೆ ಅನ್ಯಾಯ ಎಸಗುತ್ತಲೇ ಇದ್ದಾನೆ. ನಮಗೂ ಆರೋಪಿಗಳಿಗೂ ಜಾಗದ ವಿಚಾರದಲ್ಲಿ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಇದೇ ಕಾರಣಕ್ಕೆ ಆತ ನಮಗೆ ಕಂಟಕನಾಗುತ್ತಿದ್ದಾನೆ. ಈ ನಿಟ್ಟಿನಲ್ಲಿ ಆತನನ್ನು ಪೊಲೀಸ್ ಅಧಿಕಾರಿಗಳು ತನಿಖೆಗೊಳಪಡಿಸಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ” ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ.