ಲಕ್ಷದ್ವೀಪಕ್ಕೆ ನಗರದಿಂದ ನೌಕಾಸೇವೆ ಆರಂಭ

ತೀವ್ರತೆ ಕಳೆದುಕೊಂಡ ಓಖಿ ಚಂಡಮಾರುತ

ಮಂಗಳೂರು : ಓಖಿ ಚಂಡಮಾರುತದ ತೀವ್ರತೆಗೆ ಸಿಲುಕಿ ನಲುಗಿ ಹೋಗಿದ್ದ ಕರಾವಳಿ ಇದೀಗ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ಆರು ದಿನಗಳಿಂದ ಸ್ಥಗಿತಗೊಂಡಿದ್ದ ಚಟುವಟಿಕೆ ಗುರುವಾರದಿಂದ ವೇಗ ಪಡೆದುಕೊಂಡಿದ್ದು ಮೀನುಗಾರರ ಮೊಗದಲ್ಲಿ  ಹರ್ಷ ಕಂಡು ಬರುತ್ತಿದೆ. ಜೊತೆಗೆ ಲಕ್ಷದ್ವೀಪಕ್ಕೆ ಸರಕು ನೌಕೆಗಳ ಸಂಚಾರ ಶುಕ್ರವಾರದಿಂದ ಆರಂಭಗೊಂಡಿದೆ.

ವಾರದಲ್ಲಿ ಮೂರು ಬಾರಿ ಪ್ರಯಾಣಿಕರನ್ನು ಸಾಗಿಸುವ ಅಮಿನಿ ಡ್ಯೂ ಹಡಗು ಒಂದು ವಾರದ ವಿಶ್ರಾಂತಿ ಬಳಿಕ ಶುಕ್ರವಾರ ಬೆಳಿಗ್ಗೆ ಲಕ್ಷದ್ವೀಪಕ್ಕೆ ಹೊರಟಿದೆ. ಈ ಹಡಗಿನಲ್ಲಿ ಲಕ್ಷದ್ವೀಪಕ್ಕೆ ತೆರಳಲೆಂದು ಮಂಗಳೂರಿನಲ್ಲಿ ಕಾಯುತ್ತಿದ್ದ 60 ಮಂದಿ ಪ್ರಯಾಣಿಸಲಿದ್ದಾರೆ. ಅಲ್ಲದೆ ಮಂಗಳೂರು-ಲಕ್ಷದ್ವೀಪ ನಡುವೆ ಸರಕು ಸಾಗಾಟದ ಹಾಯಿ ಹಡಗು ಪ್ರಯಾಣ ಆರಂಭಗೊಂಡಿದೆ. ಮಂಗಳೂರಿನಲ್ಲಿ ಸಮುದ್ರದ ಅಲೆಗಳ ಅಬ್ಬರ ಇದೀಗ ಕಡಿಮೆಯಾಗಿದ್ದು, ಸುಮಾರು ಶೇ 30ರಷ್ಟು ಪರ್ಸೀನ್ ಬೋಟುಗಳು ಗುರುವಾರ ಮೀನುಗಾರಿಕೆಗೆ ತೆರಳಿವೆ. ದೀರ್ಘಾವಧಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಟ್ರಾಲ್ ಬೋಟುಗಳು ಗುರುವಾರ ಮಧ್ಯರಾತ್ರಿ ಬಳಿಕ ಮೀನುಗಾರಿಕೆಗೆ ಇಳಿದಿವೆ. ಓಖಿ ಚಂಡಮಾರುತದ ಭೀತಿಯಿಂದ ಮಂಗಳೂರು ಹಳೆ ಬಂದರು, ಎನ್‍ಎಂಪಿಟಿ, ಮಲ್ಪೆ, ಕಾರವಾರ, ಗೋವಾ ಬಂದರುಗಳಲ್ಲಿ ಬಾಕಿ ಉಳಿದಿದ್ದ ಮೀನುಗಾರರ ಬೋಟುಗಳು ಮರಳಿ ಮಂಗಳೂರು ತಲಪುವ ನಿರೀಕ್ಷೆ ಇದೆ ಎಂದು ಮೀನುಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮುಂದಿನ ಒಂದೆರಡು ದಿನಗಳ ಕಾಲ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

LEAVE A REPLY