ಗೇಟ್ ಮುರಿದು ಕಾರು ಕಳ್ಳತನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಬೀಗ ಹಾಕಲಾಗಿದ್ದ ಗೇಟನ್ನೇ ಬೇರ್ಪಡಿಸಿ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಕಳ್ಳತನ ಮಾಡಿರುವ ಆತಂಕಕಾರಿ ಘಟನೆ ಅಡ್ಯನಡ್ಕ ಸಮೀಪ ನಡೆದಿದೆ.

ವಿಟ್ಲ-ಕಾಸರಗೋಡು ಸಂಪರ್ಕ ರಸ್ತೆಯ  ಮೈರ ಎಂಬಲ್ಲಿನ ಶಿಕ್ಷಕ ರಾಜಗೋಪಾಲ ಜೋಷಿಯವರ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಮಾರುತಿ ಕಾರನ್ನು ಕಳ್ಳತನ ಮಾಡಿದ್ದಾರೆ. ಅಡ್ಯನಡ್ಕ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಜೋಷಿಯವರು ತನ್ನ ಮನೆಯಂಗಳದಲ್ಲಿ ಬುಧವಾರ ರಾತ್ರಿ ಎಂದಿನಂತೆ ಕಾರು ನಿಲ್ಲಿಸಿ ಗೇಟಿಗೆ ಬೀಗ ಜಡಿದಿದ್ದರು. ಆದರೆ ಗುರುವಾರ ಬೆಳಗ್ಗೆ ಎದ್ದು ನೋಡಿದಾಗ ಆವರಣ ಗೋಡೆಯ ಪಕ್ಕದಲ್ಲಿ ಮನೆಯ ಗೇಟು ಕಂಡುಬಂದಿದೆ. ಅತಿ ಬುದ್ಧಿವಂತ ಕಳ್ಳರು ಬೀಗ ಹಾಕಿದ್ದ ಗೇಟನ್ನೇ ಕಂಬದಿಂದ ಬೇರ್ಪಡಿಸಿ ಕಾರು ಹೊತ್ತೊಯ್ದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ವಾರದ ಹಿಂದಷ್ಟೆ ಇದೇ ಪರಿಸರದ ಎರುಂಬು ಸಂಪರ್ಕ ರಸ್ತೆಯಲ್ಲಿನ ನಿವಾಸಿ ಇಂಜಿನಿಯರೊಬ್ಬರ ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಕಳ್ಳರು ಮನೆಯವರು ಎಚ್ಚರಗೊಂಡ ಕಾರಣ ಪರಾರಿಯಾಗಿದ್ದರು. ಕಳವಾದ ಕಾರಿನ ಮಾಲಿಕ ಜೋಷಿಯವರು ಸಾಮಾಜಿಕ ಜಾಲ ತಾಣದಲ್ಲಿ ಕಾರಿನ ಫೊಟೋ ಹಾಕಿ ಸುಳಿವು ಸಿಕ್ಕಿದವರು ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ.