ಕಂದಕಕ್ಕೆ ಉರುಳಿದ ಕಾರು : 8 ವಿದ್ಯಾರ್ಥಿಗಳು ಗಂಭೀರ

ನಮ್ಮ ಪ್ರತಿನಿಧಿ ವರದಿ

ಕುಮಟಾ : ತಾಲೂಕಿನ ಮಿರ್ಜಾನಿನ ಫಾರೆಸ್ಟ್ ಕ್ವಾರ್ಟಸ್ ಎದುರು ಮಂಗಳವಾರ ಮಧ್ಯಾಹ್ನ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಹೆದ್ದಾರಿ ಪಕ್ಕದ ಕಂದಕಕ್ಕೆ ಉರುಳಿದ ಪರಿಣಾಮ ಕಾರಿನಲ್ಲಿದ್ದ ಹೊನ್ನಾವರ ಎಸ್ಡಿಎಂ ಕಾಲೇಜಿನ 8 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.

ವಿದ್ಯಾರ್ಥಿಗಳಾದ ಮಹಮ್ಮದ್ ಸಾಬ್, ಮಹಮ್ಮದ್ ಶೇಖ್, ದಾನೇಶ ರಾಜ್ ಶೇಖ್, ಜ್ಯೂಯೇಬ್ ಸಾಬ, ಮಹಮ್ಮದ್ ಮುಸ್ತಾಕ್ ಸಾಬ, ಸಾಹಿದ್ ಖಾನ್, ಮಹಮ್ಮದ್ ವಜೀರಾ, ಮಹಮ್ಮದ್ ಅನ್ಫಾಲ್ ಜಿದ್ದಾ ಗಾಯಗೊಂಡವರು. ಇವರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಕಾರಿನಲ್ಲಿ ಗೋಕರ್ಣಕ್ಕೆ ತೆರಳಿದ್ದು, ವಾಪಸ್ ಹೊನ್ನಾವರಕ್ಕೆ ಬರುತ್ತಿರುವ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪರಿಣಾಮ ಈ ಅಪಘಾತ ಸಂಭವಿಸಿದೆ. ಸ್ಥಳೀಯರ ಸಹಕಾರದಿಂದ ಗಾಯಗೊಂಡವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರಕ್ಕೆ ಕರೆದೊಯ್ಯಲಾಗಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.