ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಕಾರು ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ತಲೆಗೆ ಕಬ್ಬಿಣದ ಸರಳು ನುಗ್ಗಿ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸ್ವಿಫ್ಟ್ ಕಾರು ಹೆದ್ದಾರಿ ಮಧ್ಯದಲ್ಲಿ ನಿಲ್ಲಿಸಲಾಗಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದು ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಸಲಫೀ ಮಸೀದಿ ಪರಿಸರದಲ್ಲಿ ಸೋಮವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ.

ಮೊರತ್ತಣೆ ನಿವಾಸಿ ಹನೀಫ ಎಂಬವರ ಪುತ್ರಿ ಅಸ್ನಾ (9) ಎಂಬಾಕೆಗೆ ಮನೆ ಪರಿಸರದಲ್ಲಿ ಕಬ್ಬಿಣದ ಸರಳು ತಲೆಗೆ ನುಗ್ಗಿ ಗಾಯಗೊಂಡಿದ್ದಳು. ಈಕೆಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಕುಂಜತ್ತೂರು ಸಲಫೀ ಮಸೀದಿಯ ರಾಷ್ಟ್ರೀಯ  ಹೆದ್ದಾರಿ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಫರ್ನೀಚರ್ ಅಂಗಡಿಯೊಂದರ ಮಾಲಕನ ಪಿಕಪ್ ವಾಹನವನ್ನು ಅಂಗಡಿಯ ಮುಂಭಾಗದ ರಸ್ತೆ ಮಧ್ಯೆ ನಿಲ್ಲಿಸಲಾಗಿತ್ತೆಂದು ಅಪಘಾತಕ್ಕೀಡಾದ ಕಾರು ಚಾಲಕ ದೂರಿದ್ದಾರೆ.

ಅಪಘಾತದಲ್ಲಿ ಕಾರಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವುದಾಗಿ ಹೇಳಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಬೇರೊಂದು ವಾಹನದಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.