ತಂತಾನೇ ಬೆಂಕಿ ; ಕಾರು ಭಸ್ಮ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಪುತ್ತಿಗೆ ಸಂಪಿಗೆ ಬಳಿ ಕಾರೊಂದಕ್ಕೆ ಬೆಂಕಿ ಹತ್ತಿಕೊಂಡು ಸಂಪೂರ್ಣ ಭಸ್ಮಗೊಂಡ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ಈ ಕಾರು ಆಳ್ವಾಸ್ ಕಾಲೇಜಿನ ಉಪನ್ಯಾಸಕ ನವೀನ್ ಎಂಬವರ ಸಹೋದರನಿಗೆ ಸೇರಿದ್ದನ್ನಲಾಗಿದೆ. ನವೀನ್ ಎಂಬವರು ಇದೇ ಕಾರಿನಲ್ಲಿ ಬುಧವಾರ ಕಾಲೇಜಿಗೆಂದು ಹೊರಟಿದ್ದರು. ಆದರೆ ಕಾರಿನಲ್ಲಿ ಸಣ್ಣ ಪ್ರಮಾಣದ ಹೊಗೆ ಕಾಣಿಸಿಕೊಂಡಾಗ ಏನೋ ತಾಂತ್ರಿಕ ದೋಷವಿರಬಹುದು, ನಂತರ ಗ್ಯಾರೇಜಿನವರನ್ನು ಕರೆಸಿ ಪರೀಕ್ಷೆಸೋಣ ಎಂದು ಕಾರನ್ನು ಮನೆ ಹತ್ತಿರ ಬಿಟ್ಟು ದ್ವಿಚಕ್ರ ವಾಹನದಲ್ಲಿ ತನ್ನ ಪತ್ನಿ ಜತೆ ಕಾಲೇಜಿಗೆ ಹೊರಟಿದ್ದರು. ಇದಾದ ಸ್ವಲ್ಪ ಹೊತ್ತಿನ ಬಳಿಕ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಇಡೀ ಕಾರನ್ನು ಆವರಿಸಿ ಕಾರು ಸಂಪೂರ್ಣ ಭಸ್ಮಗೊಂಡಿದೆ ಎನ್ನಲಾಗಿದೆ.

ಅಗ್ನಿಶಾಮಕ ಸಿಬಂದಿ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದಾದದರೂ ಅದಾಗಲೇ ಕಾರು ಬಹುತೇಕ ಸುಟ್ಟುಹೋಗಿದೆ. ಕಾರಿನಲ್ಲಿ ಯಾರು ಇಲ್ಲದಿದ್ದುದರಿಂದ ಯಾವುದೇ ಜೀವ ಹಾನಿಯಾಗಲಿಲ್ಲ.