ಟೆಂಪೋ ಗುದ್ದಿ ಕಾರು ಚಾಲಕ ಸ್ಪಾಟ್ ಡೆತ್

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಅನಿಲ ಸಿಲಿಂಡರ್ ಸಾಗಾಟ ಮಾಡುತ್ತಿದ್ದ ಟೆಂಪೋ ಮತ್ತು ವ್ಯಾಗನರ್ ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ತೋಡಾರಿನಲ್ಲಿ ಸಂಭವಿಸಿದೆ.  ಗಂಜಿಮಠದಿಂದ ಮೂಡುಬಿದಿರೆ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಅಡುಗೆ ಅನಿಲ ಸಾಗಾಟ ಮಾಡುತ್ತಿದ್ದ ಟೆಂಪೋ ರಾಷ್ಟ್ರೀಯ ಹೆದ್ದಾರಿ ತೋಡಾರಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದು ಘಟನೆಯ ತೀವ್ರತೆಗೆ ಕಾರಿನಲ್ಲಿದ್ದ ಬೆಂಗಳೂರು ಮೂಲದ ಮನೋಹರ್ ಎಂಬವರು

ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಂಗಳೂರು ತಾಲೂಕಿನ ಗಂಜಿಮಠದಲ್ಲಿರುವ ಬ್ಯಾಗ್ ತಯಾರಿಕಾ ಘಟಕದಲ್ಲಿ ಉದ್ಯೋಗದಲ್ಲಿದ್ದ ಮನೋಹರ್ ತನ್ನ ಸಹೋದ್ಯೋಗಿಯೊಂದಿಗೆ ಕಾರಿನಲ್ಲಿ ಹಾವೇರಿಗೆಂದು ಪ್ರಯಾಣ ಬೆಳೆಸಿದ್ದರು. ಹಾವೇರಿಯಲ್ಲಿ ಈ ಇಬ್ಬರೂ ಕಾರು ಪ್ರಯಾಣಿಕರ ಸಹೋದ್ಯೋಗಿಯೊಬ್ಬರ ಮದುವೆ ಕಾರ್ಯಕ್ರಮವಿತ್ತು.

ಕಾರು ಚಾಲನೆ ಮಾಡುತ್ತಿದ್ದ ಮನೋಹರ್ ಅವರ ಸಹೋದ್ಯೋಗಿ ತೀವ್ರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.