ಹೊಸ ಇತಿಹಾಸ ನಿರ್ಮಿಸುವರೇ `ಕ್ಯಾಪ್ಟನ್ ಕೊಹ್ಲಿ’

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಟೀಂ ಇಂಡಿಯಾ ಇದೀಗ ಟೆಸ್ಟ್ ಕ್ರಿಕೆಟಿನಲ್ಲಿ ಹೊಸ ಇತಿಹಾಸ ನಿರ್ಮಿಸುವ ಹಾದಿಯಲ್ಲಿದೆ. ಈ ಇತಿಹಾಸ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ದಾಖಲಾಗುತ್ತದೆ ಎನ್ನುವುದೇ ಅಭಿಮಾನದ ವಿಚಾರ.

ವಿರಾಟ್ ಕೊಹ್ಲಿ ಒಬ್ಬ ಪೈಟಿಂಗ್ ಕ್ರಿಕೆಟರ್. ಯಾವಾಗಲೂ ತಂಡ ಗೆಲ್ಲಬೇಕೆಂಬುವುದೇ ಇವರ ಹಂಬಲ. ಹಾಗಾಗಿ ಕೆಲವೊಮ್ಮೆ ಅವರು ಎಡವಟ್ಟು ಮಾಡಿಕೊಂಡದ್ದು ಇದೇ. ಇಂತಹ ಅಪೂರ್ವ ವ್ಯಕ್ತಿತ್ವದ ಕೊಹ್ಲಿ  ಬಗ್ಗೆ ಖಂಡಿತವಾಗಿಯೂ ಕ್ರಿಕೆಟ್ ಅಭಿಮಾನಿಗಳಿಗೆ ಗೌರವವಿದೆ.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟಿನಲ್ಲಿ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡವರು. ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ನಂತರ ನಾಯಕರಾಗಿ ಕೊಹ್ಲಿ ಆಯ್ಕೆ ನಡೆಯಿತು. ಇವರು ನಾಯಕತ್ವ ವಹಿಸಿದ ಹೊಸದರಲ್ಲೇ ಹೊಸ ಭರವಸೆಯನ್ನು ಮೂಡಿಸಿ ಟೆಸ್ಟ್ ಕ್ರಿಕೆಟಿನಲ್ಲಿ ತನ್ನದೇ ಆದ ಪ್ರಭುತ್ವವನ್ನು ಸ್ಥಾಪಿಸಿದರು. ತನ್ನ ಅಲ್ಪ ಅವಧಿಯ ನಾಯಕತ್ವದಲ್ಲಿ ಕೊಹ್ಲಿ ಹಲವಾರು ದಾಖಲೆಗಳ ಒಡೆಯರಾದರು. ಈಗ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲೂ ಕೊಹ್ಲಿ ನಾಯಕತ್ವ ಮಿಂಚಿದ್ದು ಮಾತ್ರವಲ್ಲ ಕೊನೆಯ ಟೆಸ್ಟ್ ಪಂದ್ಯವನ್ನು ಗೆದ್ದರೆ ಅದೊಂದು ಹೊಸ ದಾಖಲೆಯಾಗಲಿದೆ.

ದಾಖಲೆ ಯಾವುದು ?

ಟೀಂ ಇಂಡಿಯಾ ಈಗಾಗಲೇ ಶ್ರೀಲಂಕಾ ನೆಲದಲ್ಲಿ ಸತತ ಎರಡು ಟೆಸ್ಟ್ ಪಂದ್ಯಗಳನ್ನು ಕೊಹ್ಲಿ ನಾಯಕತ್ವ ಗೆದ್ದಿದೆ. ಗಾಲೆ ಟೆಸ್ಟಿನಲ್ಲಿ 304 ರನ್ನುಗಳ ಭರ್ಜರಿ ಜಯ ಗಳಿಸಿದ ನಂತರ ಕೊಲಂಬೊ ಟೆಸ್ಟಿನಲ್ಲೂ ಇನ್ನಿಂಗ್ಸ್ ಮತ್ತು 53 ರನ್ನುಗಳಿಂದ ಟೀಂ ಇಂಡಿಯಾ ಜಯಗಳಿಸಿದೆ. ಈಗ ಪಲ್ಲೇಕೆಲೆ ಟೆಸ್ಟಿನಲ್ಲೂ ಗೆಲುವಿನ ಹಾದಿಯನ್ನು ಕೊಹ್ಲಿ ಕಾಣಬಹುದು ಎನ್ನುವ ಆಶಾಭಾವನೆ ಇದೆ.  ಈ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದದೇ ಆದರೆ, ಅದೊಂದು ಹೊಸ ಇತಿಹಾಸ.

ಟೀಂ ಇಂಡಿಯಾ ಇದುವರೆಗೆ ವಿದೇಶಿ ನೆಲದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದ ಇತಿಹಾಸವಿಲ್ಲ. ಆದರೆ, ಶ್ರೀಲಂಕಾ ನೆಲದಲ್ಲಿ ಇಂತಹ ಅಪೂರ್ವ ದಾಖಲೆ ನಿರ್ಮಾಣಕ್ಕೆ ವೇದಿಕೆ ಈಗ  ಸಜ್ಜುಗೊಂಡಿದೆ. ಈ ಅಪೂರ್ವ ದಾಖಲೆಗೆ ವಿರಾಟ್ ಕೊಹ್ಲಿ ನಾಯಕತ್ವ ಸಾಕ್ಷಿಯಾಗಲಿದೆ ಎನ್ನುವುದೇ ದಾಖಲೆ.

ಟೀಂ ಇಂಡಿಯಾ ಈ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ಗೆದ್ದರೆ ಮತ್ತೊಂದು ದಾಖಲೆಗೆ ಭಾಜನವಾಗಲಿದೆ.

ಶ್ರೀಲಂಕಾ ನೆಲದಲ್ಲಿ 1968ರ ನಂತರ ಯಾವುದೇ ವಿದೇಶಿ ತಂಡ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದ ದಾಖಲೆ ಇಲ್ಲ. 2004ರಲ್ಲಿ ಆಸ್ಟ್ರೇಲಿಯಾ ತಂಡವು ಶ್ರೀಲಂಕಾದಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ಜಯಿಸಿತ್ತು. ಇದೀಗ 13 ವರ್ಷಗಳ ನಂತರ ಇದೇ ದಾಖಲೆ ಟೀಂ ಇಂಡಿಯಾದಿಂದ ನಿರ್ಮಾಣವಾಗುವ ಸಂಭವವಿದೆ.

ಈ ದಾಖಲೆಯ ಜೊತೆಗೆ ಕೊಹ್ಲಿ ನಾಯಕತ್ವ ಕೂಡ ಹೊಸ ಸಂಭ್ರಮದಲ್ಲಿದೆ. 2015ರಲ್ಲಿ ಕೊಹ್ಲಿ ಬಳಗ ಶ್ರೀಲಂಕಾದಲ್ಲಿ ಸರಣಿ ಗೆದ್ದಿತ್ತು. ಈ ಬಾರಿಯು ಈಗಾಗಲೇ ಇನ್ನೂ ಒಂದು ಟೆಸ್ಟ್ ಇರುವಾಗಲೇ ಕೊಹ್ಲಿ ಬಳಗ ಸರಣಿ ಗೆದ್ದಿತ್ತು. ಇದು ಕೂಡ ದಾಖಲೆ.

ಶ್ರೀಲಂಕಾ ವಿರುದ್ಧ ಸರಣಿ ಗೆದ್ದ ವಿರಾಟ್ ಕೊಹ್ಲಿ ತನ್ನ ನಾಯಕತ್ವದ ಎಂಟನೇ ಸರಣಿ  ವಿಜಯೋತ್ಸವನ್ನು ಗೈದಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ನಾಯಕ ಸ್ಟೀವ್ ವೋ ಏಳು ಸರಣಿಗಳನ್ನು ಗೆದ್ದಿದ್ದರು. ಇದೀಗ ಈ ದಾಖಲೆಯನ್ನು ಕೊಹ್ಲಿ ಮುರಿದು ಮುನ್ನುಗ್ಗಿದ್ದಾರೆ.

ವಿರಾಟ್ ಕೊಹ್ಲಿ ಇದುವರೆಗೆ ಒಟ್ಟು 28 ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ಪೈಕಿ 18ರಲ್ಲಿ ಅವರ ನಾಯಕತ್ವ ಗೆಲುವು ಸಾಧಿಸಿದೆ. ಮೂರು ಪಂದ್ಯದಲ್ಲಿ ಸೋಲು ಕಂಡರೆ, 6 ಪಂದ್ಯಗಳು ಡ್ರಾ ಆಗಿವೆ. ಹೀಗೆ ಸಾಧನೆಯ ಪರ್ವ ಕಾಲದಲ್ಲಿರುವ ವಿರಾಟ್ ಕೊಹ್ಲಿ ಯಶಸ್ವಿ ಕ್ಯಾಪ್ಟನ್ ಆಗಿ ಮೂಡಿ ಬರುತ್ತಿದ್ದಾರೆ.

ಈಗಾಗಲೇ ವಿಶ್ವ ಕ್ರಿಕೆಟ್ ರಂಗದ ಅನೇಕ ಕ್ರಿಕೆಟ್ ದಿಗ್ಗಜರು ವಿರಾಟ್ ಕೊಹ್ಲಿ ನಾಯಕತ್ವವನ್ನು ಬಹುವಾಗಿ ಪ್ರಶಂಸಿಸಿದ್ದಾರೆ. ಭಾರತೀಯ ಕ್ರಿಕೆಟ್ ರಂಗ ಕಂಡ ಅಪರೂಪದ ನಾಯಕರಾಗಿ ವಿರಾಟ್ ಕೊಹ್ಲಿ ಮಿಂಚುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ವಿರಾಟ್ ಕೊಹ್ಲಿ ಬದ್ಧತೆಯ ಆಟಗಾರನಾಗಿ ಹಾಗೂ ಟ್ಯಾಲೆಂಟೆಡ್ ಕ್ಯಾಪ್ಟನ್ ಆಗಿರುವುದರಿಂದಲೇ ಅವರೊಬ್ಬ ವಿಶ್ವ ಕ್ರಿಕೆಟ್ ರಂಗದ ಅಪರೂಪದ ನಾಯಕ.