ಭ್ರಷ್ಟಾಚಾರ ಪೋಷಕ ಜನಪ್ರತಿನಿಧಿಗಳಿಂದ ಸಾಮಾಜಿಕ ನ್ಯಾಯ ನಿರೀಕ್ಷೆ ಸಾಧ್ಯವಿಲ್ಲ

ಕಾರ್ಯಕ್ರಮದಲ್ಲಿ ಸಂತೋಷ ಹೆಗಡೆ ಮಾತನಾಡುತ್ತಿರುವದು

ಜಸ್ಟೀಸ್ ಸಂತೋಷ ಹೆಗಡೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : “ಚುನಾಯಿತ ಪ್ರತಿನಿಧಿಗಳು ಮತದಾರರನ್ನು ಅಲಕ್ಷ ಮಾಡುತ್ತಿದ್ದಾರೆ. ಇಂತಹ ಭಾವನೆಯಿಂದ ಪ್ರಜಾಪ್ರಭುತ್ವ ಉಳಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರ ಮಾಡುವವರನ್ನು ರಕ್ಷಿಸುವ ಜನಪ್ರತಿನಿಧಿಗಳಿಂದ ಯಾವ ಸಾಮಾಜಿಕ ನ್ಯಾಯ ನಿರೀಕ್ಷೆಯೂ ಸಾಧ್ಯವಿಲ್ಲ” ಎಂದು ಮಾಜಿ ಲೋಕಾಯುಕ್ತ ನಿವೃತ್ತ ಜಸ್ಟೀಸ್ ಸಂತೋಷ ಹೆಗಡೆ ಹೇಳಿದರು.

ಅವರು ಶನಿವಾರ ಸಂಜೆ ಎಂಇಎಸ್ ಹಬ್ಬ ಉದ್ಘಾಟಿಸಿ ಮಾತನಾಡುತ್ತಾ, “ಕಾನೂನು ಚೌಕಟ್ಟಿನಲ್ಲಿ ಶ್ರೀಮಂತರಾದರೆ ತಪ್ಪಿಲ್ಲ. ಇನ್ನೊಬ್ಬರ ಜೇಬಿಗೆ ಕೈ ಹಾಕಿ, ಹೊಟ್ಟೆ ಹೊಡೆದು ಹಣ ಮಾಡುವುದು, ದುರಾಸೆ ವiಟ್ಟಕ್ಕೆ ಹೋದರೆ ಜನರು ಹಿಂದೆ ಬರಲು ಆಗುವುದಿಲ್ಲ. ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕುವ ವ್ಯವಸ್ಥೆ ಇದೆ. ಇಂತಹ ಸಮಾಜದ ಬದಲಾವಣೆ ಆಗದಿದ್ದರೆ ಕಂಟಕ ಮುಂದಿನ ಪೀಳಿಗೆಗೆ ಆಗಲಿದೆ. ಸಮಾಜ, ದೇಶಕ್ಕೆ ಉತ್ತಮ ಭವಿಷ್ಯ ಇರುವುದಿಲ್ಲ. ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಳಂಬ ನ್ಯಾಯದಾನದಿಂದ ಜನರಿಗೂ ನಿರಾಸೆ ಆಗುತ್ತಿದೆ. ನ್ಯಾಯಾಂಗದ ವಿಚಾರಗಳು ಹೊರಗೆ ಚರ್ಚೆ ಆಗುವುದು ಉತ್ತಮ ಬೆಳವಣಿಗೆಯಲ್ಲ. ಇದರ ಬಗ್ಗೆ ನ್ಯಾಯಾಂಗ ಕ್ಷೇತ್ರದಲ್ಲಿದ್ದವರು ಚಿಂತನೆ ಮಾಡಬೇಕು” ಎಂದರು.

“ಹಣ ಪಡೆದು ಸುಳ್ಳು ವರದಿ ಮಾಡುವುದು, ದುರಾಸೆ, ಮೌಲ್ಯಗಳ ಕುಸಿತ ಮಾಧ್ಯಮ ವಲಯದಲ್ಲೂ ಕಾಣುತ್ತಿದೆ. ಇಂದು ಸದನದಲ್ಲಿ ಬರೇ ಸಭಾತ್ಯಾಗ, ಅನಗತ್ಯ ಚರ್ಚೆ ಹೆಚ್ಚುತ್ತಿದೆ. ನಿತ್ಯ ಕೋಟ್ಯಾಂತರ ರೂ ವೇಸ್ಟ್ ಆಗುತ್ತಿದೆ. ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಹಗರಣಗಳು ಆಗುತ್ತಿದೆ. ಬರೇ ಸಾವಿರಾರು ಕೋಟಿ ರೂ ಹಗರಣಗಳಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಇಂದಿನ ಯುವಜನಾಂಗದ ಮೇಲೆ ಭರವಸೆ ಇದ್ದು, ಅವರು ವ್ಯವಸ್ಥೆಯ ದೋಷಗಳನ್ನು ಅರಿತು ಇದರ ಬದಲಾವಣೆಗೆ ಮುಂದಾಗಬೇಕು. ಆಗ ಮಾತ್ರ 10-15 ವರ್ಷದಲ್ಲಿ ಭ್ರಷ್ಟರಹಿತ ವ್ಯವಸ್ಥೆ ಬರಬಹುದು” ಎಂದರು.