ಹೈಟೆಕ್ ತೊಟ್ಟಿಲು ವಿನ್ಯಾಸಗೊಳಿಸಿದ ಕೆನರಾ ಇಂಜಿನಿಯರಿಂಗ್ ವಿದ್ಯಾರ್ಥಿಗಳು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವುದು ಕೆಲವೊಮ್ಮೆ ತನ್ನ ಕೆಲಸದೊತ್ತಡದಲ್ಲಿ ತಾಯಿಯೊಬ್ಬಳಿಗೆ ತ್ರಾಸದಾಯಕ ಕೆಲಸವೆಂಬುದನ್ನು ಅಲ್ಲಗಳೆಯಲಾಗದು. ತಾಯಂದಿರ ಅನುಕೂಲವನ್ನು ಗಮನದಲ್ಲಿರಿಸಿಯೇ ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು ಹೈಟೆಕ್ ತೊಟ್ಟಿಲೊಂದನ್ನು ವಿನ್ಯಾಸಗೊಳಿಸಿದೆ. ಈ ತೊಟ್ಟಿಲಲ್ಲಿ ಮಗುವನ್ನು ಮಲಗಿಸಿದರಷ್ಟೇ ಸಾಕು, ತೊಟ್ಟಿಲು ತನ್ನಿಂತಾನಾಗಿಯೇ ತೂಗುತ್ತದೆ. ಅಷ್ಟೇ ಅಲ್ಲ, ಮಗು ಹಾಸಿಗೆ ಒದ್ದೆ ಮಾಡಿದಾಗಲೂ ಅದು ತಾಯಿಯಯನ್ನು ಎಚ್ಚರಿಸುತ್ತದೆ.

“ನಮ್ಮ ಗೆಳತಿಯ ಸಹೋದರಿಯೊಬ್ಬಳು ಮಗುವಿನ ತೊಟ್ಟಿಲನ್ನು ಸದಾ ತೂಗುತ್ತಾ ಇರಲು ಕಷ್ಟಪಡುತ್ತಿರುವುದನ್ನು ನೋಡಿ ನಾವ್ಯಾಕೆ ಸ್ವಯಂಚಾಲಿತ ತೊಟ್ಟಿಲನ್ನು ತಯಾರಿಸಬಾರದು ಎಂದು ಈ ಯೋಜನೆ ಕೈಗೆತ್ತಿಕೊಂಡು ಮಾದರಿಯೊಂದನ್ನು ಸಿದ್ಧಪಡಿಸಿದ್ದೇವೆ” ಎಂದು ಈ ತೊಟ್ಟಿಲನ್ನು ವಿನ್ಯಾಸಗೊಳಿಸಿದ ತಂಡದಲ್ಲಿರುವ ವರದರಾಜ್ ಭಟ್ ಹೇಳುತ್ತಾರೆ. ಅವರು ತಮ್ಮ ಸಹಪಾಠಿಗಳಾದ ಸುಪರ್ಣಾ ಪೈ, ಸ್ನೇಹಾ ಭಟ್ ಮತ್ತು ವರುಣ್ ಶೆಣೈ ಜತೆಗೂಡಿ ತಮ್ಮ ಅಂತಿಮ ವರ್ಷದ ಪ್ರಾಜೆಕ್ಟ್ ಅಂಗವಾಗಿ ಈ ತೊಟ್ಟಿಲು ಸಿದ್ಧಪಡಿಸಿದ್ದಾರೆ. ಅವರಿಗೆ ಈ ನಿಟ್ಟಿನಲ್ಲಿ ಅವರ ಪ್ರಾಧ್ಯಾಪಕಿ ಜಯಶ್ರೀ ಮಾರ್ಗದರ್ಶನವೂ ದೊರೆತಿದೆ.

ಈ ತೊಟ್ಟಿಲು ಸ್ವಯಂಚಾಲಿತವಾಗಿ ತೂಗುವುದಲ್ಲದೆ ತೊಟ್ಟಿಲಿನಲ್ಲಿ ಅಳವಡಿಸಲಾಗಿರುವ ಧ್ವನಿ ಸೆನ್ಸರುಗಳ ಮುಖಾಂತರ ಮಗುವಿನ ಚಲನವಲನಗಳ ಮೇಲೆ ನಿಗಾ ಇಡಬಹುದಾಗಿದೆ. ಮಗು ಹಾಸಿಗೆ ಒದ್ದೆ ಮಾಡಿದಾಗ ಅದನ್ನು ಬದಲಾಯಿಸುವಂತೆ ಹೆತ್ತವರಿಗೆ ಸಂದೇಶ ಕೂಡ ಈ ಸಾಧನ ಕಳುಹಿಸುವುದು.

ತೊಟ್ಟಿಲಿನಲ್ಲಿರುವ ಮಗು ಅಳುವುದನ್ನು ನಿಲ್ಲಿಸದೇ ಇದ್ದರೆ ಕೂಡ ಹೆತ್ತÀವರಿಗೆ ಸಂದೇಶ ತಲುಪುತ್ತದೆ. ತೊಟ್ಟಿಲಿನಲ್ಲಿ ಕ್ಯಾಮರಾ ಕೂಡ ಇದ್ದು ಮಗುವಿನ ಚಲನವಲನಗಳನ್ನು ಹೆತ್ತವರು ಗಮನಿಸಬಹುದಾಗಿದೆ. ಸುಮಾರು ಒಂದು ತಿಂಗಳ ಸತತ ಪ್ರಯತ್ನದ ಬಳಿಕ ಈ ತೊಟ್ಟಿಲು ಅಭಿವೃದ್ಧಿಗೊಂಡಿದ್ದು, ನಮಗೆ ಶೇ 80 ಯಶಸ್ಸು ದೊರೆತಿದೆಯಾದರೂ ಈ ಸಾಧನದಲ್ಲಿ ಇನ್ನೂ ಹಲವಾರು ಸುಧಾರಣೆಗಳನ್ನು ತರಲು ಬಾಕಿಯಿದೆ ಎಂದು ತಂಡದ ಸದಸ್ಯರು ಹೇಳುತ್ತಾರೆ.