ಈ ವಯಸ್ಸಿನಲ್ಲಿ ಪುನಃ ಮದುವೆಯಾಗಬಹುದೇ?

ಪ್ರ : ನನಗೀಗ 58 ವರ್ಷ. ರಿಟೈರ್ಮೆಂಟ್ ತೆಗೆದುಕೊಂಡಿದ್ದೇನೆ. ನನ್ನ ಹೆಂಡತಿ ತೀರಿಹೋಗಿ ಹತ್ತು ವರ್ಷಗಳಾದವು. ನಮಗೆ ಮಕ್ಕಳಿಲ್ಲ. ಅಪರೂಪಕ್ಕೊಮ್ಮೆ ನನ್ನ ಅಣ್ಣನ ಮಕ್ಕಳು ಬಂದು ನನ್ನನ್ನು ನೋಡಿಕೊಂಡು ಹೋಗುವುದು ಬಿಟ್ಟರೆ  ಉಳಿದಂತೆ ನನ್ನದು ಒಂಟಿ ಬದುಕು. ಜೀವನವೇ ಬೋರು ಎನಿಸುತ್ತಿತ್ತು. ಸ್ವಲ್ಪ ಸಮಯದ ಹಿಂದೆ ನಾನೊಂದು ಯೋಗ ಕ್ಲಾಸಿಗೆ ಹೋಗುತ್ತಿದ್ದೆ. ಅಲ್ಲಿಗೆ ಒಬ್ಬಳು 50 ದಾಟಿದ ಮಹಿಳೆಯೂ ಬರುತ್ತಿದ್ದಳು. ನಮ್ಮ ಮಧ್ಯೆ ಒಳ್ಳೆಯ ಸ್ನೇಹ ಬೆಳೆದಿದೆ. ಅವಳಿಗೆ ಒಬ್ಬ ಮಗನಿದ್ದಾನೆ. ಅವನ ಹೆಂಡತಿ ತುಂಬಾ ಜೋರಂತೆ. ಅವಳ ಜೊತೆ ಏಗಲೇ ಈಕೆಗೆ ಕಷ್ಟವಾಗುತ್ತಿದೆಯಂತೆ. ಈಕೆಯನ್ನು ಸರಿಯಾಗಿ ಮಗನೂ ವಿಚಾರಿಸಿಕೊಳ್ಳುತ್ತಿಲ್ಲವಂತೆ. ನನ್ನ ಮತ್ತು ಅವಳ ವಿಚಾರಧಾರೆಗಳು ತುಂಬಾ ಮ್ಯಾಚ್ ಆಗುತ್ತವೆ.  ಅವಳು ನನ್ನ ಜೀವನಸಂಗಾತಿಯಾದರೆ ನನ್ನ ಉಳಿದ ಜೀವನವನ್ನು ನೆಮ್ಮದಿಯಿಂದ ಕಳೆಯಬಹುದು ಅನ್ನುವುದು ನನ್ನ ಅನಿಸಿಕೆ. ಅವಳಲ್ಲಿ ಮದುವೆಯ ಪ್ರಸ್ತಾಪ ಇಟ್ಟಿದ್ದೇನೆ. ಅದಕ್ಕೆ ಆಕೆಯಿನ್ನೂ ಉತ್ತರಿಸಿಲ್ಲ. ನನಗೇನೂ ಸಮಾಜದ ಬಗ್ಗೆ ಕೇರ್ ಇಲ್ಲ. ಅವಳು ಒಪ್ಪಿದರೆ ಮದುವೆ ಮಾಡಿಕೊಂಡರೆ ತಪ್ಪಿದೆಯಾ?

: ನೀವೀಗ ನಿವೃತ್ತಿ ಹೊಂದಿರುವುದರಿಂದ ಮತ್ತಿಷ್ಟು ನಿಮಗೆ ಒಂಟಿತನ ಕಾಡುತ್ತಿರಬಹುದು. ಮೊದಲಾಗಿದ್ದರೆ ನಿಮಗೆ ಆಫೀಸಿಗೆ ಹೋಗುವುದರಿಂದ ಕಲೀಗ್ಸ್ ಜೊತೆ ಟೈಂಪಾಸ್ ಆಗುತ್ತಿತ್ತು. ಇಳಿವಯಸ್ಸಿನಲ್ಲಿ ಕಷ್ಟಸುಖ ಹಂಚಿಕೊಳ್ಳಲು ಸಂಗಾತಿ ಇಲ್ಲದಿದ್ದರೆ ಸ್ವಲ್ಪ ಕಷ್ಟವೇ. ಆದರೆ ನೀವೀಗ ಬರೀ ಸಮಾಜ ಏನು ಹೇಳುತ್ತದೆ ಅನ್ನುವುದಕ್ಕಿಂತ ನಿಮ್ಮ ಜೀವನ ಈಗಿನಕ್ಕಿಂತ ಕಷ್ಟಕ್ಕೆ ಸಿಲುಕದ ಹಾಗೆ ನೋಡಿಕೊಳ್ಳುವುದೂ ಮುಖ್ಯ. ಅಲ್ಲದೇ ನೀವೀಗ ಮದುವೆಯಾಗಲು ಬಯಸುವ ಮಹಿಳೆ ಮಗ, ಸೊಸೆ ಎಷ್ಟೇ ತೊಂದರೆ ಕೊಟ್ಟರೂ ತನ್ನ ಸಂಬಂಧವನ್ನು ಕಡಿದುಕೊಂಡು ಎಲ್ಲಾ ವ್ಯಾಮೋಹದಿಂದ ಹೊರಬರಲು ಅಷ್ಟು ಬೇಗ ತಯಾರಾಗುವುದು ಕಷ್ಟವೇ.  ಅವಳ ಮಗ ಮದುವೆಯನ್ನು ವಿರೋಧಿಸಿದರಂತೂ ಆಕೆ ಮುಂದುವರಿದು ನಿಮ್ಮ ಬಳಿ ಬರಲಾರಳು. ಒಂದು ವೇಳೆ ಅವಳು ನಿಮ್ಮನ್ನು ಸಂಗಾತಿಯಾಗಿ ಸ್ವೀಕರಿಸಲು ತಯಾರಾದರೂ ನೀವು ಗಡಿಬಿಡಿಯಲ್ಲಿ ಮದುವೆಯಾಗುವುದಕ್ಕಿಂತ ಪುನರ್ವಿವಾಹದ ಸಾಧಕಭಾಧಕಗಳ ಬಗ್ಗೆ ಸರಿಯಾಗಿ ಯೋಚಿಸಿಯೇ ನಿರ್ಧಾರ ಕೈಗೊಳ್ಳುವುದು ಉತ್ತಮ. ಇಷ್ಟು ವರ್ಷ ನೀವು ನಿಮಗೆ ಬೇಕಾದ ರೀತಿ ಸ್ವತಂತ್ರವಾಗಿ ಬದುಕಿದ್ದೀರಿ. ಮುಂದೆ ಅವಳ ಯೋಗಕ್ಷೇಮದ ಎಲ್ಲಾ ಜವಾಬ್ದಾರಿಯನ್ನು ನೀವೇ ಹೊರಲು ಸಿದ್ಧವಾಗಬೇಕಾಗುತ್ತದೆ. ಅದಕ್ಕೆಲ್ಲ ತಯಾರಿದ್ದರೆ ಮತ್ತು ಒಬ್ಬರು ಇನ್ನೊಬ್ಬರಿಗೆ ಆಸರೆಯಾಗಿ ನಿಲ್ಲಬಲ್ಲಿರಿ ಅನ್ನುವ ವಿಶ್ವಾಸ ನಿಮಗಿಬ್ಬರಿಗೂ ಇದ್ದರೆ ಮಾತ್ರ ಮುಂದುವರಿಯಿರಿ.

LEAVE A REPLY