ನನ್ನ ಪ್ರೀತಿ ಅವರಿಗೆ ತಿಳಿಸಲೇ ?

ದೊಡ್ಡ ಕೆಲಸದಲ್ಲಿರುವುದರಿಂದ ದೊಡ್ಡ ಮನಸ್ಸಿನಿಂದ ಟಿಪ್ಸ್ ಸಹ ಕೊಟ್ಟಿರಬಹುದು. ಅದನ್ನೇ ಪ್ರೀತಿ ಅಂತ ತಿಳಿದುಕೊಳ್ಳುವುದಾ?

ಪ್ರ : ನಾನು ಹತ್ತನೇ ತರಗತಿಯವರೆಗೆ ಕಲಿತು ಈ ಹೊಟೇಲಿಗೆ ರೂಮ್‍ಬಾಯಾಗಿ ಸೇರಿ ಈಗ ವರ್ಷ ಆಯಿತು. ನನ್ನ ವಯಸ್ಸೀಗ 20. ನಿಮ್ಮ ಪೇಪರ್ ದಿನಾ ಓದುತ್ತಿದ್ದೇನೆ. ನಾನು ಕೆಲವು ಸಮಯದಿಂದ ತುಂಬಾ ಟೆನ್ಷನ್ನಿನಲ್ಲಿ ಇದ್ದೇನೆ. ನನ್ನ ಮನಸ್ಸೇ ಸರಿ ಇಲ್ಲ. ನೀವಾದರೂ ನನಗೆ ದಾರಿ ತೋರಿಸಬಹುದು ಅಂತ ನಿಮಗೆ ಈ ಪತ್ರ ಬರೆಯುತ್ತಿದ್ದೆನೆ. ನಾನು ಒಬ್ಬಳು ಮಹಿಳೆಯ ಪ್ರೀತಿಯಲ್ಲಿ ಬಿದ್ದ್ದಿದ್ದೇನೆ. ಆ ಮಹಿಳೆ ಈ ಊರಿಗೆ ಆಗಾಗ ಬರುತ್ತಿರುತ್ತಾರೆ. ಅವರು ಬಂದಾಗೆಲ್ಲ ನಮ್ಮ ಹೊಟೇಲಿನಲ್ಲೇ ಇರುವುದು. ಅವರು ದೊಡ್ಡ ಕೆಲಸದಲ್ಲಿ ಇದ್ದಾರಂತೆ.  ನನಗಿಂತ ವಯಸ್ಸಿನಲ್ಲೂ ದೊಡ್ಡವರಿರಬಹುದು. ನಾನು ಹೆಚ್ಚಾಗಿ ಅವರು ಇರುವ ಅಂತಸ್ತಿಗೇ ರೂಂಬಾಯ್ ಆಗಿದ್ದೇನೆ. ಅವರಿಗೆ ಊಟ, ತಿಂಡಿ ಎಲ್ಲವನ್ನೂ ನಾನೇ ಸರಬರಾಜು ಮಾಡುವುದು. ನನ್ನನ್ನು ತುಂಬಾ ಆತ್ಮೀಯವಾಗಿ ಮಾತಾಡಿಸುತ್ತಾರೆ. ಅವರು ನಗುತ್ತಾ ಮಾತಾಡಿಸುವಾಗ ನನಗೆ ಮೈಯಲ್ಲಿ ಏನೇನೋ ಆಗುತ್ತದೆ. ಹೋಗುವಾಗ ಟಿಪ್ಸ್ ಸಹ ಕೊಡುತ್ತಾರೆ. ನನಗೀಗ ಅವರದೇ ಧ್ಯಾನವಾಗಿ ಬಿಟ್ಟಿದೆ. ಅವರಿಗೂ ನಾನೆಂದರೆ ಇಷ್ಟ ಇರಬಹುದೇ? ನಾನು ಅವರನ್ನು ಪ್ರೀತಿಸುವ ವಿಷಯ ಅವರಿಗೆ ಹೇಳಿಬಿಡಲೇ? ಆದರೆ ಅದರಿಂದ ಅವರು ಸಿಟ್ಟಾಗಿ ನಮ್ಮ ದಣಿಗೆ ಹೇಳಿದರೆ ನನ್ನ ಕೆಲಸ ಹೋಗುವುದು ಗ್ಯಾರಂಟಿ. ಇಲ್ಲಿ ಎಲ್ಲ ಅನುಕೂಲವಿದೆ. ಇಷ್ಟು ಒಳ್ಳೆಯ ಕೆಲಸ ನನಗೆ ಸಿಗುವುದೂ ಕಷ್ಟ.  ಆದರೂ ನನ್ನ ಮನಸ್ಸನ್ನು ಅವರಿಗೆ ಒಪ್ಪಿಸಿಬಿಟ್ಟಿದ್ದೇನೆ. ಏನು ಮಾಡಲಿ ನಾನೀಗ?

: ಇದು ಎಂತದ್ದು ಮಾರಾಯ. ಕನಸು ಕಾಣಲೂ ಒಂದು ಮಿತಿಯಿದೆ. ನಿನಗೆ ನೂರಕ್ಕೆ ನೂರು ಗೊತ್ತಿದೆ ಅವರು ನಿನಗೆ ಸಿಗುವವರಲ್ಲ ಅಂತ. ಮುಂದುವರಿದರೆ ಆದರಿಂದ ಆಗುವ ಪರಿಣಾಮವೇನು ಅಂತಲೂ ನಿನಗೆ ಅರಿವಿದೆ. ದಣಿಗಳು ನಿನ್ನನ್ನು ಹೊಡೆದು ಓಡಿಸುವುದು ಗ್ಯಾರೆಂಟಿ. ನೀನು ಒಂದುವೇಳೆ ಆ ಮಹಿಳೆಯ ಹತ್ತಿರ ಸಲುಗೆ ತೋರಿಸಿದರೆ ನಿನ್ನಂತಹ ಹುಡುಗರನ್ನು ಇಟ್ಟುಕೊಂಡ ಆ ಹೊಟೇಲಿಗೂ ಕೆಟ್ಟಹೆಸರು ಬರುವುದಿಲ್ಲವೇ? ಆ ಮಹಿಳೆ ಆಗಾಗ ನಿಮ್ಮ ಹೊಟೇಲಿಗೆ ಬರುವುದರಿಂದ ನಿನ್ನ ಮುಖಪರಿಚಯವೂ ಇರುವುದರಿಂದ ಮಾನವೀಯತೆಯ ದೃಷ್ಟಿಯಿಂದ ಸ್ವಲ್ಪ ಸಲುಗೆಯಿಂದ ಮಾತಾಡಿರಬಹುದು. ದೊಡ್ಡ ಕೆಲಸದಲ್ಲಿರುವುದರಿಂದ ದೊಡ್ಡ ಮನಸ್ಸಿನಿಂದ ಟಿಪ್ಸ್ ಸಹ ಕೊಟ್ಟಿರಬಹುದು. ಅದನ್ನೇ ಪ್ರೀತಿ ಅಂತ ತಿಳಿದುಕೊಳ್ಳುವುದಾ? ಅವರಿಗೆ ಮದುವೆಯಗಿ ಮಕ್ಕಳೂ ಇರಬಹುದು. ಇಲ್ಲಾ ಬೇರೆ ಯಾರೋ ಅವರ ಜೀವನದಲ್ಲಿ ಇರಲೂ ಬಹುದು. ಇಲ್ಲವಾದರೂ ಅವರು ನಿನ್ನನ್ನು ಖಂಡಿತಾ ಅವರು ಆ ದೃಷ್ಟಿಯಲ್ಲಿ ನೋಡಿರಲು ಸಾಧ್ಯವೇ ಇಲ್ಲ. ಅಂತವರನ್ನು ನಿನಗೆ ಸಂಭಾಳಿಸಲು ಆಗುವುದೂ ಇಲ್ಲ. ಸುಮ್ಮನೇ ಆಕಾಶಕ್ಕೆ ಏಣಿ ಇಡುವ ಕೆಲಸ ಮಾಡದೇ ನಿಯತ್ತಿನಿಂದ ಕೆಲಸ ಮಾಡು. ಮುಂದೆ ನಿನಗೆ ತಕ್ಕವಳನ್ನೇ ಸಂಗಾತಿಯನ್ನಾಗಿ ಮಾಡಿಕೋ.