ನಾನು ಆ ಹುಡುಗನಿಗೆ ಬಸಿರಾಗಿರಬಹುದೇ?

ತಾನು ಅಪ್ಪನಾಗುತ್ತಿದ್ದೇನೆ ಅನ್ನುವ ಸಂತಸದಲ್ಲಿರುವ ಅವರಿಗೆ ಯಾವ ಬಾಯಿಂದ ಅದು ಅವರ ಮಗುವಲ್ಲ ಅನ್ನುತ್ತೀರಿ? ಸತ್ಯ ಗೊತ್ತಾದರೂ ನಿಮ್ಮನ್ನು ಕ್ಷಮಿಸಲು ಅವರೇನು ಗೌತಮ ಬುದ್ಧನೇ?

ಪ್ರ : ನನಗೆ 29 ವರ್ಷ. ಮದುವೆಯಾಗಿ ಎರಡು ವರ್ಷಗಳಾದವು. ನನ್ನ ಗಂಡ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್. ಅವರು ಆಗಾಗ ಹೊರಊರಿಗೂ ಹೋಗುತ್ತಿರುತ್ತಾರೆ. ನಮ್ಮ ಮನೆಯ ಹೊರಗಿನ ಒಂದು ರೂಮನ್ನು ಇಬ್ಬರು ಹುಡುಗರಿಗೆ ಬಾಡಿಗೆ ಕೊಟ್ಟಿದ್ದೇವೆ. ಅದರಲ್ಲಿ ಒಂದು ಹುಡುಗ ಸಂಜೆಯ ಶಿಫ್ಟಿನಲ್ಲಿ ಕೆಲಸಕ್ಕೆ ಹೋಗುವುದು. ಹಾಗಾಗಿ ಬೆಳಿಗ್ಗಿನ ಹೊತ್ತು ನಾನು ಮತ್ತು ಇನ್ನೊಬ್ಬ ಹುಡುಗ ಇಬ್ಬರೇ ಕಂಪೌಂಡಿನಲ್ಲಿ ಇರುವುದು. ನನ್ನ ಗಂಡನಿಗೆ ಸೆಕ್ಸಿನಲ್ಲಿ ಆಸಕ್ತಿ ಕಡಿಮೆ. ಆ ಹುಡುಗ ನೋಡಲು ಹ್ಯಾಂಡ್‍ಸಮ್ ಇದ್ದಾನೆ. ಅದೂ ಅಲ್ಲದೇ ನನ್ನ ಜೊತೆ ಸ್ನೇಹದಲ್ಲೂ ಇದ್ದಾನೆ. ಅವನು ನನ್ನ ಜೊತೆ ಪೋಲಿಜೋಕ್ಸ್ ಕೂಡಾ ಮಾಡುತ್ತಿದ್ದ. ನನಗೆ ಅವನ ಮಾತು ಇಷ್ಟವಾಗುತ್ತಿತ್ತು. ನಮ್ಮ ಮಧ್ಯೆ ಹಾಗೇ ಅಫೇರ್ ಶುರುವಾಯಿತು. ಬೆಳಿಗ್ಗಿನ ಹೊತ್ತು ಯಾರೂ ಇಲ್ಲದಾಗ ಅನೇಕ ಬಾರಿ ಒಂದಾಗಿದ್ದೇವೆ. ಗಂಡ ಬಯಸಿದಾಗೆಲ್ಲ ಅವರ ಆಸೆಯನ್ನೂ ಪೂರೈಸಿದ್ದೇನೆ. ನಾನೀಗ ಎರಡು ತಿಂಗಳ ಗರ್ಭಿಣಿ. ನಾನು ತಾಯಾಗುತ್ತಿರುವ ವಿಷಯ ಕೇಳಿ ಗಂಡನಿಗೆ ತುಂಬಾ ಖುಶಿಯಾಗಿದೆ. ಆದರೆ ನನಗೆ ಈ ಮಗು ಆ ಹುಡುಗನದ್ದಿರಬಹುದು ಅನ್ನುವ ಸಂಶಯ. ಆ ಹುಡುಗನಿಗೆ ವಿಷಯ ಗೊತ್ತಾಗಿ ಅವನು ಹೆದರಿ ಈ ರೂಮೇ ಬಿಟ್ಟು ಹೋಗಿದ್ದಾನೆ. ನನ್ನ ಬಳಿ ಇರುವ ಅವನ ಮೊಬೈಲ್ ನಂಬರ್ ಕೂಡಾ ಸ್ವಿಚ್ ಆಫ್ ಬರುತ್ತಿದೆ. ಗಂಡನಿಗೆ ಸತ್ಯ ಹೇಳಬೇಕೋ ಬೇಡವೋ ಅನ್ನುವ ಗೊಂದಲದಲ್ಲಿದ್ದೇನೆ. ಗಂಡನಿಗೆ ವಿಷಯ ಗೊತ್ತಾದರೆ ನನ್ನಿಂದಲೇ ದೂರವಾದರೆ ಅನ್ನುವ ಭಯವೂ ಇದೆ. ನಾನೀಗ ಏನು ಮಾಡಲಿ?

: ತಿಳಿಯದೇ ಮಾಡಿದ ತಪ್ಪಿಗೆ ಕ್ಷಮೆಯಿದೆ. ಆದರೆ ನೀವು ಗೊತ್ತಿದ್ದೂ  ನಿಮ್ಮ ಗಂಡನಿಗೆ ಮೋಸ ಮಾಡಿದ್ದೀರಿ. ಆತ್ಮಸಾಕ್ಷಿಯೆನ್ನುವುದೇ ಇಲ್ಲದ ನಿಮಗೆ ಯಾವ ರೀತಿಯ ಸಲಹೆ ಕೊಡಲಿ? ನಿಮ್ಮ ಸಂಸಾರಕ್ಕಾಗಿಯೇ ಊರೂರು ಅಲೆದು ದುಡಿಯುತ್ತಿರುವ ನಿಮ್ಮ ಗಂಡನಿಗೆ ಅವರ ಬೆನ್ನ ಹಿಂದೆ ನೀವು ಈ ರೀತಿ ಅನ್ಯಾಯ ಮಾಡಬಾರದಿತ್ತು. ತಾನು ಅಪ್ಪನಾಗುತ್ತಿದ್ದೇನೆ ಅನ್ನುವ ಸಂತಸದಲ್ಲಿರುವ ಅವರಿಗೆ ಯಾವ ಬಾಯಿಂದ ಅದು ಅವರ ಮಗುವಲ್ಲ ಅನ್ನುತ್ತೀರಿ? ಸತ್ಯ ಗೊತ್ತಾದರೂ ನಿಮ್ಮನ್ನು ಕ್ಷಮಿಸಲು ಅವರೇನು ಗೌತಮ ಬುದ್ಧನೇ? ವಿಷಯ ಮುಚ್ಚಿಟ್ಟರೂ ಒಂದಲ್ಲ ಒಂದು ದಿನ ಸತ್ಯ ಹೊರಬರಲೂಬಹುದು. ಅದೂ ಅಲ್ಲದೆ ಈಗ ಬಸಿರಾಗಿದ್ದಾಗ ಸಾಮಾನ್ಯವಾಗಿ ತಂದೆಯ ಬ್ಲಡ್‍ಗ್ರೂಪ್ ಸಹ ಕೇಳುತ್ತಾರೆ. ಗರ್ಭದಲ್ಲಿ ಶಿಶುವಿನ ಬೆಳವಣಿಗೆಯ ಸಂಬಂಧ ಏನಾದರೂ ತೊಂದರೆ ಇದ್ದರೆ ನಿವಾರಿಸಲು ಆ ಮಾಹಿತಿ ವೈದ್ಯರಿಗೆ ಅಗತ್ಯವಾಗಿರುತ್ತದೆ. ನೀವು ಸತ್ಯ ಮುಚ್ಚಿಟ್ಟರೆ ಮುಂದೆ ಏನಾದರೂ ನಿಮಗೆ ಅಥವಾ ಮಗುವಿಗೆ ತೊಂದರೆಯಾದರೆ ಅದಕ್ಕೆ ನೀವೇ ಜವಾಬ್ದಾರರಾಗುತ್ತೀರಿ. ತಪ್ಪು ಮಾಡುವಾಗ ನಿಮ್ಮ ಒಳಮನಸ್ಸಂತೂ ನಿಮ್ಮನ್ನು ಎಚ್ಚರಿಸಲಿಲ್ಲ, ಕೊನೇ ಪಕ್ಷ ಆ ಹುಡುಗನ ಜೊತೆ ಮಜಾ ಉಡಾಯಿಸುವಾಗ ಸುರಕ್ಷತೆಯ ಬಗ್ಗೆಯೂ ಯೋಚಿಸಿಲ್ಲ ಅಂದರೆ ನಿಮಗೆ ವಿವೇಕವೂ ಇಲ್ಲ ಅಂತಾಯಿತು. ಜೀವನಪೂರ್ತಿ ನೀವು ಮಾಡಿದ ತಪ್ಪು ನಿಮ್ಮನ್ನು ಕಾಡದೇ ಇರದು. ಈಗ ಸತ್ಯ ಹೇಳಿದರೂ ಗಂಡನಿಗೆ ನೋವು ಕೊಡುವುದು ಬಿಟ್ಟು ಬೇರೇನು ಲಾಭ? ಇನ್ನಾದರೂ ಗಂಡನಿಗೆ ನಿಷ್ಟಳಾಗಿರಿ.