ನನಗೆ ಏಡ್ಸ್ ಬಂದಿರಬಹುದೇ?

ಪ್ರ : ಹೇರಳ ಆಸ್ತಿ ಇರುವ ತಂದೆಗೆ ಒಬ್ಬನೇ ಮಗ ನಾನು. ನಮಗೆ ಸುಮಾರು ವರ್ಷಗಳಿಂದ ಹೋಲ್‍ಸೇಲ್ ಬಿಸಿನೆಸ್ ಇದೆ. ನೋಡಿಕೊಳ್ಳಲು ಸಾಕಷ್ಟು ಜನರಿದ್ದಾರೆ. ನಂಬಿಗಸ್ಥ ಮೆನೇಜರ್ ಇರುವುದರಿಂದ ಬಿಸಿನೆಸ್ ಹೆಚ್ಚು ತಲೆಬಿಸಿ ಇಲ್ಲದೇ ನಡೆದುಕೊಂಡು ಹೋಗುತ್ತಿದೆ. ಸಂಜೆಯ ಹೊತ್ತು ಸ್ನೇಹಿತರೊಂದಿಗೆ ಪಾರ್ಟಿ ಅಥವಾ ಕ್ಲಬ್ಬುಗಳಲ್ಲಿ ಆರಾಮವಾಗಿ ಕಳೆಯುತ್ತಾ ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ. ಮದುವೆಯಾದರೂ ನನ್ನ ಈ ರೀತಿಯ ಜೀವನಶೈಲಿಗೆ ಯಾವ ದಕ್ಕೆಯೂ ಆಗಿಲ್ಲ. ಹೆಂಡತಿ ತುಂಬಾ ಮುಗ್ಧೆ. ನನ್ನ ಯಾವ ಸುಖಕ್ಕೂ ಅಡ್ಡಿ ಬರುವುದಿಲ್ಲ ಅವಳು. ಅವಳಿಗೆ ಈಗ ಹೆರಿಗೆಯಾಗಿ ತವರು ಮನೆಯಲ್ಲಿ ಇದ್ದಾಳೆ. ಅವಳು ಗರ್ಭಿಣಿಯಾಗಿದ್ದಾಗ ತುಂಬಾ ವೀಕ್ ಇದ್ದಳು. ಡಾಕ್ಟರ್ ಬೆಡ್ ರೆಸ್ಟ್‍ಗೆ ಸಲಹೆ ನೀಡಿದ್ದರಿಂದ ಅವಳಿಗೆ ಮೂರು ತಿಂಗಳಾಗಿದ್ದಾಗಿನಿಂದ ಇದೇ ಊರಿಗೆ ಸಮೀಪವಿರುವ ಅವಳ ಅಮ್ಮನ ಮನೆಯಲ್ಲಿಯೇ ಇದ್ದಾಳೆ. ಸೆಕ್ಸ್ ಸಹ ಬೇಡವೆಂದು ಡಾಕ್ಟರ್ ಹೇಳಿದ್ದರಿಂದ ನಾನು ಅವಳ ತವರಿಗೆ ಹೋಗಿದ್ದೂ ಕಡಿಮೆ. ಆದರೆ ನನಗೆ ಆ ಸುಖದಿಂದ ಜಾಸ್ತಿ ದಿನ ದೂರ ಇರುವುದು ಸಾಧ್ಯವಾಗಿರಲಿಲ್ಲ. ಅದೇ ಸಮಯದಲ್ಲಿ ನನಗೊಬ್ಬಳು ಪಾರ್ಟಿಯಲ್ಲಿ ಪರಿಚಯವಾಗಿ ಅದು ಸಂಬಂಧವಾಗಿ ಮಾರ್ಪಟ್ಟಿತು. ಅವಳ ಗಂಡ ವಿದೇಶದಲ್ಲಿ ಇದ್ದಾನೆ. ಅವಳೂ ನನ್ನ ಹಾಗೇ ಸಂಗಾತಿಯಿಲ್ಲದೇ ವಿರಹ ಅನುಭವಿಸುತ್ತಿದ್ದಳು. ಅನೇಕ ಸಲ ಅವಳ ಮನೆಯಲ್ಲಿ ನಾನು ಅವಳ ಸಂಗದಲ್ಲಿ ಕಳೆದಿದ್ದೇನೆ. ಅವಳಿಗೂ ಮದುವೆಯಾಗಿದ್ದರಿಂದ ನನ್ನ ದಾಂಪತ್ಯಕ್ಕೆ ಯಾವ ತೊಂದರೆಯೂ ಇಲ್ಲ ಅಂತ ನಿರಾಳವಾಗಿಯೇ ಹೆಂಡತಿ ಹತ್ತಿರವಿಲ್ಲದಿದ್ದರೂ ಸೆಕ್ಸ್ ಸುಖ ಅನುಭವಿಸಿಕೊಂಡು ಹಾಯಾಗಿದ್ದೆ. ಆದರೆ ಆಕೆಗೆ ಬೇರೆಯವರ ಜೊತೆಯೂ ರಿಲೇಶನ್‍ಶಿಪ್ ಇದೆ ಅಂತ ಕೆಲವು ದಿನಗಳ ಹಿಂದೆಯಷ್ಟೇ ಗೊತ್ತಾಗಿ ಕಂಗಾಲಾಗಿದ್ದೇನೆ. ಈ ನಡುವೆ ನನ್ನ ಗುಪ್ತಾಂಗದಲ್ಲಿ ನವೆ ಕಾಣಿಸಿಕೊಂಡಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಹೆಂಡತಿ ನಮ್ಮ ಮಗನೊಂದಿಗೆ ಮನೆಗೆ ಬರುತ್ತಿದ್ದಾಳೆ. ಈ ಸಂತೋಷದ ಸಮಯದಲ್ಲಿ ನಾನು ಚಿಂತೆ ಪಡುವಂತಾಗಿದೆ. ನನಗೇನಾದರೂ ಏಡ್ಸ್ ಬಂದಿರಬಹುದೇ ಅನ್ನುವ ಭಯವೂ ಕಾಡುತ್ತಿದೆ. ಹೆಂಡತಿಗೆ ಮೋಸ ಮಾಡಿದ್ದಕ್ಕೆ ದೇವರು ನನಗೀ ಶಿಕ್ಷೆ ಕೊಟ್ಟಿರಬಹುದೇ? ಪರೀಕ್ಷೆ ಮಾಡಿಸಿಕೊಳ್ಳಲೂ ಭಯವಾಗುತ್ತಿದೆ. ಏನು ಮಾಡಲಿ ನಾನೀಗ?

: ನೀತಿ, ನಿಯತ್ತು ಅಂತ ಜೀವನದಲ್ಲಿ ಇಲ್ಲದಿದ್ದರೆ ಕೊನೆಗೆ ಆಗುವುದು ಹೀಗೇ. ಎಷ್ಟು ಸುಖವಿದ್ದರೂ ತೃಪ್ತಿಯಿಲ್ಲದ ರೀತಿ ವರ್ತಿಸಿದರೆ ಮತ್ತೇನು ಆಗುತ್ತದೆ? ನಿಮಗೆ ಎಲ್ಲಾ ಇದೆ. ಐಷಾರಾಮೀ ಜೀವನವನ್ನು ಸಾಗಿಸುತ್ತಿರುವ ನಿಮಗೆ ನಿಮ್ಮ ಹೆಂಡತಿಯ ಬಗ್ಗೆಯೂ ಅಕ್ಕರೆಯಿಲ್ಲ. ಅದಿದ್ದಿದ್ದರೆ ನಿಮ್ಮ ಮಗುವನ್ನು ಹೊಟ್ಟೆಯಲ್ಲಿ ಹೊತ್ತುಕೊಂಡು ಆಕೆ ಕಷ್ಟ ಅನುಭವಿಸುತ್ತಿರವಾಗ ನೀವಿಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಾ ಬೇರೆ ಹೆಂಗಸೊಂದಿಗೆ ಮಜಾ ಉಡಾಯಿಸುತ್ತಾ ಕಾಲಕಳೆಯುತ್ತಿರಲಿಲ್ಲ. ಆ ಸಮಯದಲ್ಲಿ ಅವಳು ತವರಿನಲ್ಲಿ ಇದ್ದರೂ ಆಗಾಗ ಅಲ್ಲಿಗೆ ಹೋಗಿ ಅವಳ ಯೋಗಕ್ಷೇಮ ವಿಚಾರಿಸುತ್ತಾ ಅವಳ ಜೊತೆಯೇ ಸಮಯ ಕಳೆಯಬಹುದಿತ್ತಲ್ಲಾ. ಸೆಕ್ಸ್ ಬೇಡ ಅಂದಾಕ್ಷಣ ಅವಳು ನಿಮ್ಮ ಜೀವನಸಂಗಾತಿಯೆನ್ನುವುದೂ ಮರೆತುಬಿಟ್ಟಿರಾ? ಅವಳನ್ನು ಬರೀ ಸೆಕ್ಸ್‍ಗೋಸ್ಕರ ಮಾತ್ರ ನೀವು ಮದುವೆಯಾಗಿದ್ದಾ? ನಿಮ್ಮಂತಹ ಗಂಡನನ್ನು ಅವಳು ಪುಣ್ಯ ಮಾಡಿ ಪಡೆದಿರಬೇಕು! ಅವಳ ಮುಗ್ಧತನವನ್ನು ನೀವು ಈ ರೀತಿ ದುರುಪಯೋಗ ಪಡಿಸಿಕೊಳ್ಳಬಾರದಿತ್ತು. ಈಗ ಮಗನೊಂದಿಗೆ ಮನೆಗೆ ಮರಳುವ ಅವಳಿಗೆ ನೀವು ಯಾವ ಉಡುಗೊರೆ ಕೊಡುತ್ತೀರಿ? ಒಂದು ವೇಳೆ ನಿಮ್ಮ ಊಹೆಯಂತೆ ನಿಮಗೆ ಹೆಚ್‍ಐವಿ ಸೋಂಕೇ ತಗಲಿದ್ದರೆ ಅವಳು ನಿಮ್ಮ ಸಹವಾಸ ಮಾಡಿದರೆ ಅದು ಅವಳಿಗೂ ಪಾಸ್ ಆಗುತ್ತದೆ ಅಷ್ಟೇ. ಏನೂ ತಪ್ಪು ಮಾಡದ ಅವಳ್ಯಾಕೆ ಆ ಶಿಕ್ಷೆ ಅನುಭವಿಸಬೇಕು? ಮೊದಲು ನೀವು ನಿಮ್ಮ ರಕ್ತ ಪರೀಕ್ಷಿಸಿಕೊಳ್ಳಿ. ಸೋಂಕು ತಗಲಿದ್ದರೆ ಅದಕ್ಕೆ ಔಷಧಿ ಮಾಡಿಸಿಕೊಂಡು ಆದಷ್ಟು ಬೇಗ ಗುಣಮುಖರಾಗಿ. ಇನ್ನಾದರೂ ಹೆಂಡತಿಗೆ ನಿಷ್ಠಳಾಗಿದ್ದು ಜೀವನವನ್ನು ನಿಯತ್ತಿನಿಂದ ಕಳೆಯುವುದನ್ನು ರೂಢಿಸಿಕೊಳ್ಳಿ. ನಿಮ್ಮ ಈ ಕಳ್ಳಾಟ ಗೊತ್ತಾದರೆ ಹೆಂಡತಿ ನಿಮ್ಮಿಂದ ದೂರವಾಗಲೂ ಬಯಸಬಹುದು ಅನ್ನುವುದು ನೆನಪಿರಲಿ.