ಪಕ್ಕದ ಮನೆಯಾಕೆ ನನ್ನ ಗಂಡನನ್ನು ಬಲೆಗೆ ಕೆಡವಿಕೊಳ್ಳಬಹುದಾ ?

ಪ್ರ : ನಮ್ಮ ಮದುವೆಯಾಗಿ ಒಂದು ವರ್ಷ ಕಳೆಯಿತು. ನಮ್ಮ ಮದುವೆಯ ಮೊದಲ ಆನಿವರ್ಸರಿಗೆ ನಾವು ಹೊಸ ಫ್ಲಾಟ್ ಖರೀದಿಸಿ ನಮಗೆ ನಾವೇ ಗಿಫ್ಟ್ ಕೊಟ್ಟುಕೊಂಡೆವು. ಮದುವೆಯಾದ ದಿನದಿಂದಲೂ ನಮ್ಮದೇ ಸ್ವಂತ ಮನೆಯಲ್ಲಿರಬೇಕೆಂಬ ನಮ್ಮಿಬ್ಬರ ಕನಸು ಸಾಕಾರಗೊಳಸಿಕೊಳ್ಲಲು ಸ್ವಲ್ಪ ಸಾಲ ಮಾಡಿ ಈ ಫ್ಲಾಟ್ ಕೊಂಡುಕೊಂಡೆವು. ಈ ಏರಿಯಾ ಸಹ ನಮಗೆ ಎಲ್ಲ ವಿಷಯದಲ್ಲೂ ಅನುಕೂಲವಾಗಿಯೇ ಇದೆ. ಆದರೆ ಈಗ ಕೆಲವು ದಿನಗಳಿಂದ ನನ್ನ ಮನಸ್ಸೇಕೋ ಕಸಿವಿಸಿಗೊಳ್ಳುತ್ತಿದೆ. ಅದಕ್ಕೆ ಕಾರಣ ನಮ್ಮದೇ ಮಹಡಿಯಲ್ಲಿರುವ ಪಕ್ಕದ ಫ್ಲಾಟಿನ ಹೆಂಗಸು. ಆಕೆಯ ವಯಸ್ಸು 35ರ ಆಸುಪಾಸಿರಬಹುದು. ನೋಡಲು ಆಕರ್ಷಕವಾಗಿದ್ದಾಳೆ. ಅವಳಿಗೆ ಎರಡು ಚಿಕ್ಕ ಮಕ್ಕಳೂ ಇದ್ದಾರೆ. ಮಕ್ಕಳು ಕಾರಿಡಾರಿನಲ್ಲಿ ಆಟವಾಡುತ್ತಿರುವುದರಿಂದ ಆಕೆ ಯಾವಾಗಲೂ ಬಾಗಿಲು ತೆಗೆದುಕೊಂಡೇ ಇರುತ್ತಾಳೆ. ನಾವು ಬಾಗಿಲು ತೆಗೆದ ತಕ್ಷಣ ಅವಳ ಮುಖ ದರ್ಶನವಾಗುತ್ತದೆ. ನನ್ನ ಗಂಡ ಆಫೀಸಿಗೆ ಹೋಗುವಾಗ ಬರುವಾಗಲಂತೂ ಬಾಗಿಲಿನಲ್ಲಿಯೇ ಇರುತ್ತಾರೆ. ನಮ್ಮವರನ್ನು ನಗುತ್ತಾ ಮಾತಾಡಿಸುತ್ತಾಳೆ. ನಮ್ಮವರೂ ಅವಳ ಚಿಕ್ಕಪುಟ್ಟ ಕೆಲಸ ಮಾಡಿಕೊಡುತ್ತಾರೆ. ನನ್ನ ಟೆನ್ಷನ್ನಿಗೆ ಮುಖ್ಯ ಕಾರಣವೆಂದರೆ ಅವಳ ಗಂಡ ಇರುವುದು ದುಬೈಯಲ್ಲಿ. ನಾವು ಇಲ್ಲಿಗೆ ಬಂದ ನಂತರ ಅವರು ಒಮ್ಮೆ ಮಾತ್ರ ಬಂದು ಹದಿನೈದು ದಿನ ಇದ್ದು ಹೋಗಿದ್ದಾರೆ. ನನಗೇಕೋ ಈ ನಡುವೆ ಅಸುರಕ್ಷಿತ ಭಾವನೆ ಕಾಡುತ್ತಿದೆ. ನಮ್ಮವರು ಅಂತವರಲ್ಲ ಎನ್ನುವ ನಂಬಿಕೆ ನನಗಿದ್ದರೂ ಆ ಹೆಂಗಸು ಇವರನ್ನು ಬಲೆಗೆ ಕೆಡವಿಕೊಂಡರೆ ಅಂತ ಆತಂಕ. ಇವರ ಹತ್ತಿರ ಈ ವಿಷಯ ಹೇಳಲೂ ಸಂಕೋಚವೆನಿಸುತ್ತದೆ. ಈಗ ನಾವು ಈ ಮನೆಯನ್ನು ಬಿಡುವ ಸ್ಥಿತಿಯಲ್ಲೂ ಇಲ್ಲ. ನಿಮ್ಮ ಅಭಿಪ್ರಾಯವೇನು?

: ಸಂಶಯ ಎನ್ನುವ ಹುಳ ಒಮ್ಮೆ ತಲೆಯಲ್ಲಿ ಹೊಕ್ಕರೆ ಅದು ಅಷ್ಟು ಬೇಗ ಹೊರಬರುವುದು ಕಷ್ಟವೇ. ಆದರೆ ಸ್ವಲ್ಪ ವಿಶಾಲಮನೋಭಾವ ಬೆಳೆಸಿಕೊಳ್ಳದಿದ್ದರೆ ಬದುಕೇ ದುಸ್ತರವಾಗುತ್ತದೆ. ಸುಮ್ಮನೇ ನೀವೂ ತೆಲೆಕೆಡಿಸಿಕೊಂಡು ಗಂಡನ ಮೂಡೂ ಹಾಳುಮಾಡುತ್ತೀರಿ. ಆಕೆಯೇನೂ ನಿಮ್ಮ ಗಂಡನನ್ನು ಅವರ ಮನೆಗೆ ಕರೆದಿಲ್ಲ. ಎದುರು ಸಿಕ್ಕಾಗ ಪರಿಚಯದ ನಗೆಬೀರಿ ಕೆಲವು ಮಾತನಾಡಿದ ಕೂಡಲೇ ನೀವು ಆ ರೀತಿ ತಪ್ಪು ಭಾವಿಸುವುದು ಸರಿಯಲ್ಲ. ಅದೂ ಅಲ್ಲದೇ ಆಕೆಗೂ ಎರಡು ಮಕ್ಕಳಿದ್ದಾರೆ. ಪುರಾವೆಯಿಲ್ಲದೇ ಅವಳ ಶೀಲವನ್ನು ಶಂಕಿಸುವುದೂ ಸಮಂಜಸವಲ್ಲ. ನಿಮ್ಮ ಗಂಡನ ಬಗ್ಗೆ ನೀವು ಈ ರೀತಿ ಅಪನಂಬಿಕೆಯಿಟ್ಟರೆ ಅದು ನಿಮ್ಮ ದಾಂಪತ್ಯದ ಮೇಲೆ ಕರಿನೆರಳು ಮೂಡಿಸಬಹುದು. ಅವರೂ ಹೊರಗೆ ಹೋಗುತ್ತಾರೆ. ಮಹಿಳೆಯರ ಜೊತೆ ವ್ಯವಹರಿಸಬೇಕಾಗುತ್ತದೆ. ಸುಮ್ಮನೇ ಇಲ್ಲದ್ದು ಕಲ್ಪಿಸಿಕೊಂಡು ಯಾಕೆ ನೋವು ಅನುಭವಿಸುತ್ತೀರಿ? ನಿಮ್ಮ ಪ್ರೀತಿಯ ಬಗ್ಗೆ ನಂಬಿಕೆಯಿಡಿ. ಒಂದು ನೆನಪಿಡಿ…ಪ್ರೀತಿಸುವ ಹೆಂಡತಿ ಇದ್ದರೆ ಯಾವ ಗಂಡಸೂ ಅಷ್ಟು ಬೇಗ ಬೇರೆ ಹೆಂಗಸಿನ ಸಹವಾಸ ಮಾಡುವುದಿಲ್ಲ. ಅಥವಾ ಗಂಡಸು ಅಷ್ಟೊಂದು ದುರ್ಬಲವ್ಯಕ್ತಿಯಾಗಿರಬೇಕು, ಚಂಚಲ ಸ್ವಭಾವದವನಾಗಿರಬೇಕು. ಹಾಗಾಗಿ ಸುಮ್ಮನೇ ಬೇಡದ್ದು ಯೋಚಿಸದೇ ಗಂಡನಿಗೆ ಕಿರಿಕಿರಿಯನ್ನೂ ಮಾಡದೇ ನಿಮ್ಮ ಸಹವಾಸದಲ್ಲಿ ಆತ ಎಂದೆಂದೂ ಖುಶಿಯಾಗಿರುವಂತೆ ನೋಡಿಕೊಳ್ಳುವ ಕಡೆಯೇ ನಿಮ್ಮ ಗಮನ ಇರುವುದು ಎಲ್ಲಕ್ಕಿಂತ ಮುಖ್ಯ.

 

LEAVE A REPLY