ಬೈಸಿಕಲ್ ಕ್ಲಬ್ಬಿನಿಂದ ಕ್ಯಾಲೊರೀಸ್ ಬರ್ನಿಂಗ್ ಚಾಲೆಂಜ್-2016

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸೈಕ್ಲಿಂಗಿನಿಂದ ಕ್ಯಾಲೋರಿ ಕರಗಿಸಬಹುದು, ಇದರಿಂದ ಆರೋಗ್ಯಯುತ ಜೀವನ ನಡೆಸಬಹುದು.  ಮಂಗಳೂರು ಬೈಸಿಕಲ್ ಕ್ಲಬ್ ಧ್ಯೇಯೋದ್ದೇಶವೂ ಇದೇ ಆಗಿದ್ದು, ತನ್ನ ಸದಸ್ಯರನ್ನು ಕ್ರಿಯಾತ್ಮಕವಾಗಿಡುವ ದೃಷ್ಟಿಯಿಂದ ಅಲ್ಟಿಮೇಟ್ ಕ್ಯಾಲೊರೀಸ್ ಬರ್ನಿಂಗ್ ಚಾಲೆಂಜ್-2016 ಎಂಬ ಸ್ಪರ್ಧೆಯನ್ನು ನವೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿತ್ತು.

ಮಂಗಳೂರು ಬೈಸಿಕಲ್ ಕ್ಲಬ್ ತನ್ನ ಸದಸ್ಯರನ್ನು ಕ್ರಿಯಾಶೀಲ, ಚಲನಾತ್ಮಕ, ಆರೋಗ್ಯ ಮತ್ತು ಸಮರ್ಥ ಜೀವನಕ್ಕೆ ಅನುಕೂಲವಾಗಿಸುವಂತೆ ರೂಪಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಇದೊಂದು ವಿಶಿಷ್ಟವಾದ ಸವಾಲಾಗಿತ್ತು. 15 ದಿನಗಳ ಅವಧಿಯ ಈ ಸ್ಪರ್ಧೆಗೆ 80 ಮಂದಿ ಸದಸ್ಯರು ಹೆಸರು ನೋಂದಾಯಿಸಿದ್ದರು. ಎರಡು ಮಂದಿಯ ಒಟ್ಟು 40 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯ ಅವಧಿ ನವೆಂಬರ್ 11ರಿಂದ 25. ಸೈಕ್ಲಿಸ್ಟ್ ಇಬ್ಬರು ಸೇರಿ ಒಟ್ಟು 20,000 ಕ್ಯಾಲೋರಿ ಕರಗಿಸಬೇಕು ಅಥವಾ ಇಬ್ಬರಲ್ಲಿ ಒಬ್ಬ ಸೈಕ್ಲಿಸ್ಟ್ 7500 ಕ್ಯಾಲೋರಿ ಕರಗಿಸಿದರೆ ಆತ ಅಥವಾ ಆಕೆ ಸ್ಪರ್ಧೆಗೆ ಅರ್ಹರಾಗಿರುತ್ತಾರೆ.

ಅತ್ಯಂತ ಹೆಚ್ಚು ಕ್ಯಾಲೋರಿ ಕರಗಿಸಿದ ಮೂವರಿಗೆ ವಿಶೇಷ ಬಹುಮಾನ ಮತ್ತು ಎಲ್ಲಾ ಅರ್ಹ ಸೈಕ್ಲಿಸ್ಟುಗಳಿಗೆ ಎಂಬಿಸಿ ಎಮರ್ಜೆನ್ಸಿ ಇನ್ಫೊ ಬ್ಯಾಂಡ್ ದೊರೆಯುತ್ತದೆ. ಅದೇ ರೀತಿ 7500 ಕ್ಯಾಲೊರಿ ಕರಗಿಸಿದ ಸೈಕ್ಲಿಸ್ಟುಗಳಿಗೆ ವ್ಯಯಕ್ತಿಕ ಬಹುಮಾನ ನೀಡಲಾಗುತ್ತದೆ. ಒಟ್ಟಿನಲ್ಲಿ ಸ್ಪರ್ಧಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಕೇವಲ 15 ದಿನಗಳಲ್ಲಿ ಒಟ್ಟು 3.5 ಲಕ್ಷ ಕ್ಯಾಲೋರಿ ಕರಗಿಸಿದ್ದಾರೆ.