ನಂದಳಿಕೆ ರಸ್ತೆ ಬದಿಯಲ್ಲಿ ಕೇಬಲ್ ಅಳವಡಿಕೆ : ಗ್ರಾಮಸ್ಥರ ಆಕ್ರೋಶ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಬೆಳ್ಮಣ್ ಪಂಚಾಯತ್ ವ್ಯಾಪ್ತಿಯ ನಂದಳಿಗೆ ಗ್ರಾಮದ ರಸ್ತೆಯನ್ನು ಅಲ್ಲಿನ ಗ್ರಾಮಸ್ಥರು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಅಲ್ಲಿನ ರಸ್ತೆ ಅತ್ಯಂತ ಸುಂದರ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಈಗ ಏಕಾಏಕಿ ಕೇಬಲ್ ಅಳವಡಿಸಲು ಕಾಂಕ್ರಿಟ್ ರಸ್ತೆಯ ಇಕ್ಕೆಲಗಳಲ್ಲಿ ಗುಂಡಿ ತೋಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಕ್ರೀಟ್ ರಸ್ತೆ ಇಲಾಖೆಯ ವತಿಯಿಂದ ನಿರ್ಮಾಣಗೊಂಡಿದ್ದರೂ ರಸ್ತೆಯ ಎರಡೂ ಬದಿಗಳಲ್ಲಿ ಎತ್ತರದ ಚಡಿಗಳು ಇರುವುದರಿಂದ ವಾಹನ ಸವಾರರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ನಂದಳಿಕೆ ಗ್ರಾಮದ ರಸ್ತೆಯ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 2 ಫೀಟ್ ಡಾಮರು ರಸ್ತೆಯನ್ನು ಸರಕಾರದ ಯಾವುದೇ ಅನುದಾನವನ್ನು ಕಾಯದೇ ಗ್ರಾಮಸ್ಥರೇ ಸ್ವತಃ ಖರ್ಚಿನಲ್ಲಿ ನಿರ್ಮಾಣ ಮಾಡಿದ್ದರು. ಅಲ್ಲದೆ ಮಳೆಗಾಲದ ನೀರು ಸರಾಗವಾಗಿ ಹರಿದು ಹೋಗಲು ಬದಿಗೆ ಕಲ್ಲುಗಳನ್ನೂ ಕಟ್ಟಲಾಗಿದ್ದು, ಚರಂಡಿಯನ್ನೂ ನಿರ್ಮಾಣ ಮಾಡಿದ್ದರು.

ಆದರೆ ಇದೀಗ ಯಾವುದೇ ಸೂಚನೆ ನೀಡದೆ ಬಿಎಸ್ಸೆನ್ನೆಲ್ ಟೆಂಡರ್ ಪಡೆದ ಗುತ್ತಿಗೆದಾರರು ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಹಾಕಲಾದ ಡಾಮರನ್ನು ಕಾಮಗಾರಿ ನಡೆಸುವ ನೆಪದಲ್ಲಿ ಕಿತ್ತು ಹಾಕಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ. ನಂದಳಿಕೆ ದ್ವಾರದಿಂದ ಐತಿಹಾಸಿಕ ನಂದಳಿಕೆ ಮಹಾಲಿಂಗೇಶ್ವರ ದೇವಳದವರೆಗೆ ಬಿಎಸ್ಸೆನ್ನೆಲ್ ಟೆಲಿಫೋನಿಗೆ ಸಂಬಂಧಿಸಿದ ಕೇಬಲ್ ತಂತಿಗಳನ್ನು ನೆಲದಡಿಯಲ್ಲಿ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ರಸ್ತೆಯನ್ನು ಅಗೆದು ಹಾಕಲಾಗಿದೆ.

ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ಗ್ರಾಮಸ್ಥರೇ ಉದ್ಯಮಿಗಳು ಹಾಗೂ ಗ್ರಾಮದ ಜನರ ಸಹಕಾರದಿಂದ ಸುಂದರ ರಸ್ತೆ ನಿರ್ಮಾಣಕ್ಕಾಗಿ ಸ್ವತಃ ಡಾಮರು ರಸ್ತೆ ನಿರ್ಮಾಣ ಮಾಡಿದ್ದರು. ಗ್ರಾಮದ ಅಭಿವೃದ್ಧಿಗಾಗಿ ನಿರ್ಮಾಣ ಮಾಡಿದ ರಸ್ತೆಯನ್ನು ಕೇಬಲ್ ಅಳಡಿಸಲು ಅಗೆದು ಹಾಕಿರುವುದು ಎಷ್ಟು ಸರಿ ಎನ್ನುವುದು ಗ್ರಾಮಸ್ಥರ ಪ್ರಶ್ನೆ. ಜೊತೆಗೆ ಈ ರಸ್ತೆಯನ್ನು ಅಗೆಯುತ್ತಿರುವುದು ತೀರಾ ಬೇಸರದ ಸಂಗತಿ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.