ಕಾರು ಡಿಕ್ಕಿ ಉದ್ಯಮಿ ಸಾವು

ಮೃತ ರಾಜೇಂದ್ರ ಶೆಟ್ಟಿ

ನಮ್ಮ ಪ್ರತಿನಿಧಿ ವರದಿ
ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೋಲ್ನಾಡು ಎಂಬಲ್ಲಿ ಕಾರೊಂದು ಡಿಕ್ಕಿಯಾಗಿ ವಾಕಿಂಗ್ ಹೊರಟ ಉದ್ಯಮಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗ್ಗಿನ ಜಾವ 5ರ ಸುಮಾರಿಗೆ ನಡೆದಿದೆ. ಮೃತ ವ್ಯಕ್ತಿಯನ್ನು ಕಾರ್ನಾಡು ಬೈಪಾಸ್ ಬಳಿಯ ನಿವಾಸಿ ರಾಜೇಂದ್ರ ಶೆಟ್ಟಿ (62) ಎಂದು ಗುರುತಿಸಲಾಗಿದೆ.
ಕಾರ್ನಾಡು ಬೈಪಾಸ್ ಬಳಿ ವಾಸವಾಗಿರುವ ಉದ್ಯಮಿ ರಾಜೇಂದ್ರ ಶೆಟ್ಟಿ ಎಂದಿನಂತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಾಕಿಂಗ್ ಹೋಗುತ್ತಿದ್ದಾಗ ಉಡುಪಿ ಕಡೆಯಿಂದ ಕೃಷ್ಣಾಪುರ ಕಡೆಗೆ ಹೋಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ಬಳಿಕ ಕೋಲ್ನಾಡು ಬಳಿ ಹೆದ್ದಾರಿಯಲ್ಲಿ ಇರಿಸಲಾಗಿದ್ದ ಬ್ಯಾರಿಕೇಡರುಗಳಿಗೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತದ ರಭಸಕ್ಕೆ ರಾಜೆಂದ್ರ ಶೆಟ್ಟಿಯವರ ತಲೆಗೆ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತ ನಡೆದು ಸುಮಾರು ಎರಡು ಗಂಟೆಗಳ ಕಾಲ ಹೆದ್ದಾರಿಯಲ್ಲಿ ಶವ ಬಿದ್ದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮುಲ್ಕಿ ಠಾಣೆಗೆ ದೂರವಾಣಿ ಮೂಲಕ ತಿಳಿಸಿದರೂ ಅವರು ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಘಾತ ನಡೆಸಿದ ಕಾರು ಚಿಕ್ಕಮಗಳೂರು ನೊಂದಣಿಯಾಗಿದ್ದು, ಕೃಷ್ಣಾಪುರ ಮೂಲದ ಯುವಕಗೆ ಸೇರಿದೆ ಎನ್ನಲಾಗಿದೆ. ಕಾರ್ನಾಡು ಬೈಪಾಸಿನ ಬಳಿಯ ನಿವಾಸಿಯಾಗಿರುವ ರಾಜೇಂದ್ರ ಶೆಟ್ಟಿ ಪಕ್ಷಿಕೆರೆ ಪಂಜದಲ್ಲಿ ವರ್ಷಗಳ ಹಿಂದೆ ಕ್ವಾರಿ ಉದ್ಯಮ ನಡೆಸುತ್ತಿದ್ದು ಬಳಿಕ ಬೇರೆಯವರಿಗೆ ವಹಿಸಿಕೊಟ್ಟು ವಿಶ್ರಾಂತಿ ಜೀವನ ನಡೆಸುತ್ತಿದ್ದರು ಎನ್ನಲಾಗಿದ್ದು, ಅವರು ಪತ್ನಿಯನ್ನು ಅಗಲಿದ್ದಾರೆ.
ಸುರತ್ಕಲ್ ಟ್ರಾಫಿಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.