ಅಧಿಕಾರಿಗಳ ಹುಸಿ ಭರವಸೆ ಖಂಡಿಸಿ ಬಸ್ ಮಾಲಕರಿಂದ ಅನಿರ್ಧಿಷ್ಟಾವಧಿ ಮುಷ್ಕರ

ಹೊಸಂಗಡಿ ಮುರತ್ತಣೆ ಮೀಯಪದವು ರಸ್ತೆಯ ಅವ್ಯವಸ್ಥೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಶೋಚನೀಯ ಸ್ಥಿತಿಯಲ್ಲಿರುವ ರಸ್ತೆಯ ದುರಸ್ತಿ ಬಗ್ಗೆ ಅಧಿಕಾರಿಗಳು ನೀಡಿದ ಭರವಸೆ ಈಡೇರದ ಹಿನ್ನೆಲೆಯಲ್ಲಿ ಬಸ್ ಮಾಲಕರು ಮತ್ತೆ ಮುಷ್ಕರಕ್ಕಿಳಿಯಲು ನಿರ್ಧರಿಸಿದ್ದಾರೆ.
ಹೊಸಂಗಡಿ-ಮೀಯಪದವು, ಹೊಸಂಗಡಿ-ಮೊರತ್ತಣೆ-ಮೀಯಪದವು-ಉಪ್ಪಳ, ಉಪ್ಪಳ-ಬಾಳಿಯೂರು ಮೊದಲಾದ ನಾಲ್ಕು ರೂಟಿನಲ್ಲಿ ಜ 25ರಿಂದ ಅನಿರ್ದಿಷ್ಟಾವಧಿ ಬಸ್ ಸಂಚಾರ ಮೊಟಕುಗೊಳಿಸಿ ಮುಷ್ಕರ ಹೂಡಲು ಸೋಮವಾರ ಬೆಳಿಗ್ಗೆ ನಡೆದ ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಳೆದ ಅಕ್ಟೋಬರ್ 12ರಿಂದ ಈ ರೂಟುಗಳಲ್ಲಿ ಬಸ್ ಸಂಚಾರ ಮೊಟಕುಗೊಳಿಸಿ ಮುಷ್ಕರ ಹೂಡಲು ಮಾಲಕರು, ಕಾರ್ಮಿಕರು ತೀರ್ಮಾನಿಸಿದ್ದರು. ಆದರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಳೆಗಾಲ ಕಳೆದ ಕೂಡಲೇ ರಸ್ತೆ ದುರಸ್ತಿಗೊಳಿಸುವುದಾಗಿಯೂ, ಇದಕ್ಕೆ 9 ಕೋಟಿ ರೂ ಮಂಜೂರಾಗಿರುವುದಾಗಿಯೂ ಭರವಸೆ ನೀಡಿದ್ದರು. ಆದರೆ ಈ ಭರವಸೆ ಇದೀಗ ಜನವರಿ ಕೊನೆಗೊಳ್ಳುತ್ತಿದ್ದರೂ ಈಡೇರದ ಹಿನ್ನೆಲೆಯಲ್ಲಿ ಮತ್ತೆ ಮುಷ್ಕರ ಹೂಡಲು ಬಸ್ ಮಾಲಕರ ಸಂಘ ತೀರ್ಮಾನಿಸಿದೆ.
ಒಟ್ಟು 12 ಬಸ್ಸುಗಳು 70 ಟ್ರಿಪ್ ಈ ರೂಟಲ್ಲಿ ನಡೆಸುತ್ತಿದ್ದು, ಇದು ಮೊಟಕುಗೊಂಡರೆ ಈ ಭಾಗದ ಗ್ರಾಮೀಣ ಜನರ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಮುಷ್ಕರಕ್ಕೆ ಬಸ್ ಕಾರ್ಮಿಕರು ಬೆಂಬಲ ನೀಡಿದ್ದಾರೆ