ಕಾಡುತ್ತಿರುವ ಬಸ್ ದರ ಏರಿಕೆ

ಮಂಗಳೂರು ಮತ್ತು ಉಡುಪಿಗಳ ಖಾಸಗಿ ಬಸ್ಸುಗಳು ಸದ್ದಿಲ್ಲದೆ ಸುಮಾರು ಎರಡು ತಿಂಗಳ ಹಿಂದೆ ಪ್ರಯಾಣ ದರ ಹೆಚ್ಚಿಸಿವೆ. ಆಗ ನೋಟು ಅಮಾನ್ಯದ ಬಗ್ಗೆ ಜೋರು ಚರ್ಚೆ ನಡೆಯುತ್ತಿತ್ತು. ಹಾಗಾಗಿ, ಬಸ್ ದರ ಏರಿಕೆ ಯಾರ ಗಮನಕ್ಕೂ ಬರಲಿಲ್ಲ.
ಈಗ ನೋಟು ನಿಷೇಧದ ಅಮಲು ಸರ್ರನೆ ಇಳಿಯುತ್ತಿದ್ದಂತೆಯೇ ಬಸ್ ದರ ಏರಿಕೆ ಜನರನ್ನು ಕಾಡುತ್ತಿದೆ. ಯಾವ ಸ್ಟೇಜುಗಳಿಗೆ ಅಥವಾ ಎಷ್ಟು ದೂರಕ್ಕೆ ದರವನ್ನು ಎಷ್ಟು ಹೆಚ್ಚಿಸಲಾಗಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಬಸ್ಸುಗಳಲ್ಲಿ ಈಗ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಾರಾದರೂ, ದರ ಪಟ್ಟಿಯನ್ನು ಬಸ್ಸಿನಲ್ಲಿ ಪ್ರದರ್ಶಿಸಲಾಗಿಲ್ಲ.
ಅದೂ ಅಲ್ಲದೆ, ಹೆಚ್ಚಿನ ಬಸ್ಸುಗಳಲ್ಲಿ ಕಂಡಕ್ಟರುಗಳು ಟಿಕೆಟ್ ಕೊಡುತ್ತಿಲ್ಲ. ಟಿಕೆಟ್ ಮಶೀನಿನಲ್ಲಿ ಮುದ್ರಿತ ಟಿಕೆಟ್ ಕೊಟ್ಟರೆ ಹೆಚ್ಚುವರಿ ದರವನ್ನು ಪಾವತಿಸಲು ಪ್ರಯಾಣಿಕರು ಸಿದ್ಧರಿದ್ದಾರೆ. ಹಲವು ಸಂದರ್ಭಗಳಲ್ಲಿ ಪ್ರಯಾಣಿಕರು ಈ ವಿಷಯದಲ್ಲಿ ಕಂಡಕ್ಟರುಗಳ ಜೊತೆ ಗಲಾಟೆ ಮಾಡಿದ್ದಾರೆ.
ಹಾಗಾಗಿ, ಬಸ್ಸುಗಳಲ್ಲಿ ನೂತನ ದರಪಟ್ಟಿಯನ್ನು ಪ್ರದರ್ಶಿಸಿದ ಬಳಿಕವಷ್ಟೇ ಪರಿಷ್ಕøತ ದರಪಟ್ಟಿಯ ಪ್ರಕಾರ ದರ ವಸೂಲಿ ಮಾಡಬೇಕು ಹಾಗೂ ವಸೂಲಿ ಮಾಡಿದ ಹಣಕ್ಕೆ ಸರಿಯಾದ ಟಿಕೆಟ್ ಕೊಡಬೇಕು. ಇದು ಪ್ರಯಾಣಿಕರ ಕೋರಿಕೆ.

  • ನಿಕ್ಕಿ ಸುರತ್ಕಲ್