ಬಸ್ ಚಾಲಕರಿಗೆ ತಂಡ ಮಾರಣಾಂತಿಕ ಹಲ್ಲೆ

ಯುವತಿಯರಿಗೆ ಚುಡಾಯಿಸುತ್ತಿದ್ದ ಆರೋಪ

ಐವರ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಡ್ಯೂಟಿ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಇಬ್ಬರು ಖಾಸಗಿ ಬಸ್ ಚಾಲಕರಿಗೆ ತಂಡವೊಂದು ಏಕಾಏಕಿ ದಾಳಿ ನಡೆಸಿ ಮಾರಣಾಂತಿಕ ಹಲ್ಲೆಗೈದು, ಜೀವ ಬೆದರಿಕೆಯೊಡ್ಡಿ ಪರಾರಿಯಾದ ಘಟನೆ ನಡೆದಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಯಗೊಂಡಿರುವ ಖಾಸಗಿ ಬಸ್ಸಿನ ಚಾಲಕರಾದ ಮಂಜೇಶ್ವರ ಉದ್ಯಾವರದ ಮಾಡ ನಿವಾಸಿ ಇಮಾದ್ (28) ಮತ್ತು ಕಡಂಬಾರ್ ನಿವಾಸಿ ಅಶ್ರಫ್ (35) ಚೇತರಿಸಿಕೊಂಡಿದ್ದು, ಇವರಿಬ್ಬರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕುಂಪಲ ಹಾಗೂ ತಲಪಾಡಿ ನಿವಾಸಿಗಳಾದ ದೀಕ್ಷಿತ್, ಮಹೇಶ್, ಸಂದೇಶ್, ರವೀಶ್ ಮತ್ತು ರವಿ ಎಂದು ಗುರುತಿಸಲಾಗಿದೆ. ತಮ್ಮ ಬಸ್ಸಿನಲ್ಲಿ ಬರುತ್ತಿದ್ದ ಹಿಂದೂ ಹುಡುಗಿಯರಿಗೆ ಇವರು ಕೀಟಲೆ ನೀಡುತ್ತಿದ್ದಾರೆನ್ನುವ ಆರೋಪದಿಂದ ಆಕ್ರೋಶಗೊಂಡಿದ್ದ ತಂಡ ಇವರಿಬ್ಬರ ಮೇಲೆ ರಾತ್ರಿ ದಾಳಿ ನಡೆಸಿದೆ ಎನ್ನಲಾಗಿದೆ.

1 2

ಎರಡು ದಿನಗಳ ಹಿಂದೆ ಕೂಡಾ ಕಿನ್ಯಾ-ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ಸಿನ ಚಾಲಕ ವರುಣ್ ಎಂಬಾತಗೂ ತಂಡವೊಂದು ಹಲ್ಲೆ ನಡೆಸಿ ಪರಾರಿಯಾಗಿತ್ತು.

ತಲಪಾಡಿಯಿಂದ ಮಂಗಳೂರು ನಡುವೆ ಸಂಚರಿಸುವ ನಗರ ಸಾರಿಗೆ ಬಸಸಿನಲ್ಲಿ ಅಶ್ರಫ್ ಖಾಯಂ ಚಾಲಕರಾಗಿದ್ದು, ಇಮಾದ್ ಬದಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬುಧವಾರ ರಾತ್ರಿ ಅಶ್ರಫ್ ಮಂಗಳೂರಿನಿಂದ ತಲಪಾಡಿಗೆ ಕೊನೆಯ ಟ್ರಿಪ್ ನಡೆಸಿ ರಾತ್ರಿ 10 ಗಂಟೆಗೆ ಕೆಳಗಿನ ತಲಪಾಡಿಯಲ್ಲಿ ಬಸ್ ನಿಲ್ಲಿಸಿ ತಮ್ಮ ಮನೆ ಕಡೆಗೆ ಜೊತೆಯಾಗಿ ತೆರಳುತ್ತಿದ್ದರು. ಈ ವೇಳೆ ವಿವಿಧ ವಾಹನಗಳಲ್ಲಿ ಆಗಮಿಸಿದ 20ಕ್ಕೂ ಅಧಿಕ ಮಂದಿಯ ತಂಡ ಇವರಿಬ್ಬರ ಮೇಲೆ ಏಕಾಏಕಿ ಮಾರಕಾಯುಧ ಮತ್ತು ಸೋಂಟೆಯಿಂದ ಹಲ್ಲೆ ನಡೆಸಿದ್ದರು.

ಬಂಧಿತ ಐವರು ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.