ಆಟೋ ಚಾಲಕಗೆ ಬಸ್ ಡ್ರೈವರ್ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಪ್ರಯಾಣಿಕರನ್ನು ಪಿಕಪ್ ಮಾಡುವ ವಿಚಾರವಾಗಿ ಖಾಸಗಿ ಬಸ್ಸಿನ ಚಾಲಕನೊಬ್ಬ ಆಟೋ ಚಾಲಕನ ಮೇಲೆ ಹಲ್ಲೆಗೈದ ಘಟನೆ ವಿಟ್ಲದಲ್ಲಿ ನಡೆದಿದೆ.

ವಿಟ್ಲ-ಸಾಲೆತ್ತೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸಿನ ಚಾಲಕನೊಬ್ಬ ವಿಟ್ಲ ಪೊಲೀಸ್ ಠಾಣಾ ಮುಂದಿನ ರಸ್ತೆಯ ನಿಷೇಧಿತ ಸ್ಥಳದಲ್ಲಿ ಪ್ರಯಾಣಿಕರನ್ನು ಪಿಕಪ್ ಮಾಡಿದ್ದ. ಹಿಂಭಾಗದಲ್ಲಿದ್ದ ಆಟೋ ಚಾಲಕ ಬಸ್ ಚಾಲಕನ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಆಕ್ರೋಶಗೊಂಡ ಬಸ್ ಚಾಲಕ ಆಟೋ ಚಾಲಕನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದ. ಸಹೋದ್ಯೋಗಿ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ತಕ್ಷಣವೇ ಇತರ ಆಟೋ ಚಾಲಕರು ಜಮಾಯಿಸಿ ಬಸ್ಸನ್ನು ಅಡ್ಡಗಟ್ಟಿದ್ದಾರೆ. ಪರಿಸ್ಥಿತಿಯನ್ನರಿತ ಪೊಲೀಸರು ಸ್ಥಳಕ್ಕಾಗಮಿಸಿ ಎರಡೂ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಲ್ಲದೇ ಜೊತೆಗೆ ಇಬ್ಬರು ಚಾಲಕರನ್ನೂ ಠಾಣೆಗೆ ಕರೆದೊಯ್ದಿದ್ದಾರೆ. ವಿಟ್ಲದ ಹೃದಯ ಭಾಗದ ನಾಲ್ಕು ರಸ್ತೆಯಿಂದ ತಲಾ 200 ಮೀಟರ್ ನಿಷೇಧಿತ ವಲಯವೆಂದು ಹಿಂದಿನ ಜಿಲ್ಲಾಧಿಕಾರಿ ಮತ್ತು ಎಎಸ್ಪಿಯವರು ಘೋಷಣೆ ಮಾಡಿದ್ದರೂ ಖಾಸಗಿ ಬಸ್ ಚಾಲಕರು ಮಾತ್ರ ಬೇಕಾಬಟ್ಟಿಯಾಗಿ ವಾಹನ ನಿಲ್ಲಿಸುತ್ತ್ತಿದ್ದಾರೆ. ಕಾನೂನು ಉಲ್ಲಂಘಿಸುತ್ತಿರುವ ವಾಹನ ಚಾಲಕರ ವಿರುದ್ಧ ಪೊಲೀಸರು ನಿರ್ದಾಕ್ಷಣ್ಯ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಜನ ಒತ್ತಾಯಿಸಿದ್ದಾರೆ.