ಬಸ್ ಡಿಕ್ಕಿ : ಬೈಕ್ ಸವಾರ ಸಾವು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಬೈಕಿಗೆ ಡಿಕ್ಕಿ ಹೊಡೆದು ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಆದೂರು 17ನೇ ಮೈಲಿನಲ್ಲಿ ನಡೆದಿದೆ.

ಬೈಕ್ ಸವಾರ ಆದೂರು ಅಬ್ದುಲ್ ಖಾದರ್-ನಫೀಸಾ ದಂಪತಿ ಪುತ್ರ ವಿ ಕೆ ಸವಾದ್ (26) ಸಾವನ್ನಪ್ಪಿದ ದುರ್ದೈವಿ. ಆದೂರಿನ ಮನೆಯಿಂದ ಮುಳ್ಳೇರಿಯಾ ಕಡೆಗೆ ಸಂಚರಿಸುತ್ತಿದ್ದಾಗ ಕಾಸರಗೋಡಿನಿಂದ ಸುಳ್ಯದತ್ತ ಸಂಚರಿಸುತ್ತಿದ್ದ ಕೇರಳ ರಸ್ತೆ ಸಾರಿಗೆ ಬಸ್ ಡಿಕ್ಕಿ ಹೊಡೆದು ಅವಘಡಕ್ಕೆ ಕಾರಣವಾಯಿತು.

ಅಪಘಾತದ ರಭಸಕ್ಕೆ ಬೈಕ್ ಸಹಿತ ಸವಾದ್ ಬಸ್ಸಿನಡಿಗೆ ನೂಕಲ್ಪಟ್ಟಿದ್ದು, ಬಳಿಕ ನಾಗರಿಕರು ಹೊರಗೆಳೆದು ತೆಗೆದರು. ಅಷ್ಟರಲ್ಲಾಗಲೆ ಸವಾದ್ ಮೃತಪಟ್ಟಿದ್ದ. ಮೃತನು ಬೆಂಗಳೂರಿನ ಜ್ಯೂಸ್ ಅಂಗಡಿಯಲ್ಲಿ ನೌಕರನಾಗಿದ್ದನು. ಕೆಲವು ದಿನಗಳ ಹಿಂದೆಯಷ್ಟೆ ಊರಿಗೆ ರಜೆಯ ಕಾರಣ ಮರಳಿದ್ದನು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವದ ಮಹಜರು ನಡೆಸಿ ಬಂಧುಗಳಿಗೆ ಬಿಟ್ಟುಕೊಡಲಾಯಿತು.