ಗಾಯಾಳು ಸೈನಿಕರ ನೆರವಿಗಾಗಿ ನಿಧಿ ಸಂಗ್ರಹದ ಬುಲೆಟ್ ರ್ಯಾಲಿ

ಉಡುಪಿ : ಜಿಎಸ್‍ಬಿ ಸಮುದಾಯದ ಐವರು ಸದಸ್ಯರ ತಂಡವೊಂದು ಯುದ್ಧಗಳಲ್ಲಿ ಗಾಯಗೊಂಡ ಸೈನಿಕರಿಗೆ ನೆರವಾಗುವ ಉದ್ದೇಶದ `ರಾಷ್ಟ್ರ ರಕ್ಷಾ ನಿಧಿ’ ನಿಧಿ ಸಂಗ್ರಹ ಜನಜಾಗೃತಿ ಬುಲೆಟ್ ರ್ಯಾಲಿ ಹಮ್ಮಿಕೊಂಡಿದೆ.

ನವಂಬರ್ 27ರಂದು ಗೋವಾದಲ್ಲಿ ಆರಂಭಗೊಂಡಿದ್ದ ಈ ರ್ಯಾಲಿ ನವಂಬರ್ 30ರಂದು ಮುಲ್ಕಿಗೆ ಆಗಮಿಸಿತ್ತು. ಇಲ್ಲಿಂದ ಡಿಸೆಂಬರ್ 10ರಿಂದ ಎರಡನೇ ಹಂತದ ರ್ಯಾಲಿ ಆರಂಭಗೊಳ್ಳಲಿದ್ದು, ಎರಡು ದಿನಗಳ ನಂತರ ಕೇರಳ ತಲುಪಲಿದೆ.

ರ್ಯಾಲಿಗೆ ಗೋವಾ ಸೀಎಂ ಲಕ್ಷ್ಮೀಕಾಂತ್ ಪರ್ಸೇಕರ್ ಹಸಿರು ನಿಶಾನೆ ತೋರಿಸಿದ್ದರು. ರ್ಯಾಲಿಯಲ್ಲಿ ಕಾರ್ಕಳದ ರಜತ್ ಶೆಣೈ ಮತ್ತು ಕಾರ್ತಿಕ್ ಪೈ, ಕುಂದಾಪುರದ ರಾಮಚಂದ್ರ ಭಟ್, ಮಂಗಳೂರಿನ ಪರಮ್ ಭಾರಧ್ವಜ್, ಸ್ಟೇನ್ಲೀ ಫೆರ್ನಾಂಡಿಸ್ ಮತ್ತು ಮಂಜುನಾಥ್ ಕಾಮತ್ ಪಾಲ್ಗೊಂಡಿದ್ದಾರೆ.

“ಕಳೆದ ಐದು ವರ್ಷದಿಂದ ನಾವು ವಿವಿಧ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ನಡೆಸುತ್ತಿದ್ದೇವೆ. ನಮ್ಮ ದೇಶವು ಬಲಿಷ್ಠಗೊಂಡಾಗ ನಮ್ಮ ಸಮಾಜ ಬಲಿಷ್ಠಗೊಳ್ಳುತ್ತದೆ ಎಂದು ನಂಬಿದ್ದೇವೆ. ಕಾರಣ, ನಾವು `ರಾಷ್ಟ್ರ ಪ್ರಥಮ’ ಮಿಶನ್ ಆರಂಭಿಸಿದ್ದೇವೆ. ನಾವು ಪ್ರತಿಯೊಬ್ಬರಿಂದ ರಾಷ್ಟ್ರ ರಕ್ಷಾ ನಿಧಿಗಾಗಿ  ಡಿಡಿ ಮೂಲಕ 360 ರೂ ಸ್ವೀಕರಿಸುತ್ತಿದ್ದೇವೆ. ಈ ನಿಧಿಯನ್ನು ಡಿ 27ರಂದು ನಡೆಯಲಿರುವ ಜಿಎಸ್‍ಬಿ ಸಮಾವೇಶದಲ್ಲಿ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್‍ಗೆ ಹಸ್ತಾಂತರಿಸಲಿದ್ದೇವೆ” ಎಂದು ಕಾಮತ್ ತಿಳಿಸಿದರು.