ನೋಟು ಅಮಾನ್ಯದ ನಡುವೆ ಪರಿವಾರದ ಉದ್ಯಮಿಗಳ ಕಳ್ಳದಾರಿ

ಪಾಂಡಿಚೇರಿಯಲ್ಲಿ ನೋಂದಾವಣಿಯಾದ ಗೋಪಿ ಕಾರು

ಉಡುಪಿ ಮತ್ತು ದಕ್ಷಿಣ ಕನ್ನಡದ ಬಹುತೇಕ ಪರಿವಾರಕ್ಕೆ ಸೇರಿದ ವ್ಯಾಪಾರಿಗಳು, ಬಿಲ್ಡರುಗಳು, ಉದ್ಯಮಿಗಳು, ಡೀಲರುಗಳು, ಹೋಟೆಲು ಮಾಲಕರು ಇತ್ಯಾದಿ ಮಂದಿ ಒಂದೆಡೆ ತಮ್ಮ ಕಪ್ಪು ಹಣವನ್ನು ಕಳ್ಳದಾರಿ ಮೂಲಕ ಬಿಳಿ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಇನ್ನೊಂದೆಡೆ ತಮ್ಮ ಕಾರ್ಮಿಕರಿಗೆ, ಸಿಬ್ಬಂದಿಗೆ ಹಳೆಯ ನೋಟಿನ ಮೂಲಕ ವೇತನ ಬಟವಾಡೆ ಮಾಡುತ್ತಿದ್ದಾರೆ.

ಮಂಗಳೂರು : ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ ಎಂಬ ಗಾದೆ ಮಾತು ಸಂಘ ಪರಿವಾರದ ಉದ್ಯಮಿಗಳಿಗೆ ಮತ್ತು ನಕಲಿ ದೇಶ ಭಕ್ತ ವ್ಯಾಪಾರಿಗಳಿಗೆ ಹೇಳಿಮಾಡಿಸಿದಂತಿದೆ.

ಜಿಲ್ಲೆಯಲ್ಲಿ ಮಾತ್ರವಲ್ಲದೆ ದೇಶದ ಎಲ್ಲೆಡೆ ನಕಲಿ ದೇಶಪ್ರೇಮಿಗಳು ತಮ್ಮ ತೆರಿಗೆ ಪಾವತಿಸದ ಕಪ್ಪು ಹಣವನ್ನು ಬಿಳಿಮಾಡುವುದರಲ್ಲಿ ಎಲ್ಲ ಮಾನ ಮಾರ್ಯದೆಗಳಿಗೆ ಎಳ್ಳುನೀರು ಬಿಟ್ಟಿರುವುದು ನಿಚ್ಚಳವಾಗಿದೆ.

ಕೇರಳದಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರತಿನಿಧಿ ಮತ್ತು ಬಹುದೊಡ್ಡ ಕಪ್ಪು ಹಣದ ವಿರುದ್ಧದ ಹೋರಾಟಗಾರನ ಮುಖವಾಡ ತೊಟ್ಟಿರುವ ನಟ ಸುರೇಶ್ ಗೋಪಿ ಮುಖವಾಡ ಕಳಚಿಬಿದ್ದಿದೆ. ಇತ್ತೀಚೆಗೆ ಹತ್ತಿರ ಹತ್ತಿರ ಕೋಟಿ ರೂಪಾಯಿ ಮೌಲ್ಯದ ಹೊಸ ಆಡಿ ಕ್ಯೂ ಸೆವೆನ್ ಲಕ್ಸುರಿ ಕಾರು ಖರೀದಿಸಿರುವ ಸುರೇಶ್ ಗೋಪಿ ಸರಕಾರಕ್ಕೆ ನ್ಯಾಯಯುತವಾಗಿ ತೆರಬೇಕಾದ ತೆರಿಗೆಯಲ್ಲಿ ವಂಚನೆ ಮಾಡಲು ತನ್ನ ರಾಜ್ಯ ಬಿಟ್ಟು ಪಕ್ಕದ ಪಾಂಡಿಚೇರಿ ರಾಜ್ಯದಲ್ಲಿ ಕಾರು ನೋಂದಾವಣೆ ಮಾಡಿಕೊಂಡಿದ್ದಾರೆ. ಸುರೇಶ್ ಗೋಪಿ ಕೇವಲ ನಟನಲ್ಲ. ಭಾರತೀಯ ಜನತಾ ಪಾರ್ಟಿಯ ರಾಜ್ಯಸಭಾ ಸದಸ್ಯ.

ಸುರೇಶ್ ಗೋಪಿ ಎರಡು ಕಾರಣಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ. ಮೊದಲನೇಯದಾಗಿ ಅಂದಾಜು 75 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಕಾರು ಖರೀದಿಸುವ ಮೂಲಕ ತನ್ನ ಶ್ರೀಮಂತಿಕೆಯ ಪ್ರದರ್ಶನ ಮಾಡಿರುವುದು. ಅದೂ ದೇಶದ ಪ್ರಧಾನ ಮಂತ್ರಿ ಕಾಳಧನ ಹೊಂದಿರುವ ಶ್ರೀಮಂತರ ವಿರುದ್ಧ ಸಮರ ಸಾರಿರುವ ಸಂದರ್ಭದಲ್ಲಿ ಪ್ರಧಾನಿಗೆ ಸಡ್ಡು ಹೊಡೆಯುವಂತೆ ತನ್ನ ಶ್ರೀಮಂತಿಕೆಯ ಕೀಳು ಪ್ರದರ್ಶನ ಮಾಡಿದ್ದಾರೆ ಎಂಬುದು.

ಎರಡನೇಯ ಮತ್ತು ಬಹು ಮುಖ್ಯವಾದ ಆರೋಪವೆಂದರೆ ತೆರಿಗೆ ವಂಚನೆ ಮಾಡಿರುವುದು. ಪ್ರಧಾನಿ ದೇಶದ ನಿರ್ಮಾಣಕ್ಕಾಗಿ ತೆರಿಗೆ ಪಾವತಿಸಿ ಎಂದು ದೇಶದ ಜನರಲ್ಲಿ ಹೇಳಿತ್ತಿರುವಾಗ ತಮ್ಮದೇ ಪಕ್ಷದ ಬಹುಆಕಾಂಕ್ಷೆಯ ನಾಯಕ, ರಾಜ್ಯಸಭಾ ಸದಸ್ಯ ರಾಜರೋಷವಾಗಿ ತೆರಿಗೆ ವಂಚನೆ ಮಾಡಿರುವುದು.

ಹಳೆ ನೋಟುಗಳಲ್ಲೇ ದೇಶಭಕ್ತರ ವ್ಯವಹಾರ 

ಕಾನೂನು ಪ್ರಕಾರ ಸುರೇಶ್ ಗೋಪಿ ಕೇರಳದಲ್ಲಿ ತನ್ನ ಕಾರಿನ ನೋಂದಾವಣೆ ಮಾಡಬೇಕಿತ್ತು. ಹಾಗೇ ಮಾಡಿದ್ದರೆ ಅವರು 5.5 ಲಕ್ಷ ರೂಪಾಯಿ ತೆರಿಗೆ ಪಾವತಿಸಬೇಕಾಗಿತ್ತು. ಅದವರಿಗೆ ದೊಡ್ಡ ಸಂಗತಿ ಆಗಿರಲಿಲ್ಲ. ದೇಶದ ಹಿತವನ್ನೇ ಮರೆತ ಸುರೇಶ್ ಗೋಪಿ ಕೇವಲ 75 ಸಾವಿರ ಪಾವತಿಸಿ ಪಾಂಡಿಚೇರಿಯಲ್ಲಿ ಕಾರು ನೋಂದಾವಣೆ ಮಾಡಿಕೊಂಡಿದ್ದಾರೆ.

ಇದೇ ರೀತಿಯ ಕೆಲಸವನ್ನು ಬಹುಕೇತ ಮಂದಿ ನಕಲಿ ದೇಶಭಕ್ತರು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮಂಗಳೂರು ನಗರದ ಬಹುದೊಡ್ಡ ಐಸ್ ಕ್ರೀಂ ತಯಾರಕರು ಇದುವೆರೆಗೆ ಚಿಲ್ಲರೆ ವ್ಯಾಪಾರಿಗಳಿಂದ ಬ್ಯಾಂಕ್ ಮೂಲಕ ವ್ಯವಹಾರ ಮಾಡುತ್ತಿದ್ದರೆ ಕಳೆದ ನವೆಂಬರ್ 9ರಿಂದ ಕೇವಲ ಹಳೆಯ ನೂರು, ಐವತ್ತು ರೂಪಾಯಿ ಅಥವ ಹೊಸ ಎರಡು ಸಾವಿರ ರೂಪಾಯಿಯಲ್ಲಿ ಮಾತ್ರ ವ್ಯವಹಾರ ಮಾಡುತ್ತಿದ್ದಾರೆ.

ಉಡುಪಿ ಮತ್ತು ದಕ್ಷಿಣ ಕನ್ನಡದ ಬಹುತೇಕ ಪರಿವಾರಕ್ಕೆ ಸೇರಿದ ವ್ಯಾಪಾರಿಗಳು, ಬಿಲ್ಡರುಗಳು, ಉದ್ಯಮಿಗಳು, ಡೀಲರುಗಳು, ಹೊಟೇಲು ಮಾಲಕರು ಇತ್ಯಾದಿ ಮಂದಿ ಒಂದೆಡೆ ತಮ್ಮ ಕಪ್ಪು ಹಣವನ್ನು ಕಳ್ಳದಾರಿ ಮೂಲಕ ಬಿಳುಪು ಮಾಡುತ್ತಿದ್ದಾರೆ ಮಾತ್ರವಲ್ಲದೆ, ಇನ್ನೊಂದೆಡೆ ತಮ್ಮ ಕಾರ್ಮಿಕರಿಗೆ, ಸಿಬ್ಬಂದಿಗೆ ಹಳೆಯ ನೋಟಿನ ಮೂಲಕ ವೇತನ ಬಟವಾಡೆ ಮಾಡುತ್ತಿದ್ದಾರೆ. ಕೆಲವು ಅಸಾಮಿಗಳು ಎರಡು ಮತ್ತು ಮೂರು ತಿಂಗಳ ಸಂಬಳ ಮುಂಗಡವಾಗಿ ಹಳೆಯ ನೋಟುಗಳಲ್ಲಿ ನೀಡಿದ್ದಾರೆ.

ಸಂಘ ಪರಿವಾರಕ್ಕಾಗಿ ಉದ್ಯಮಿಗಳು ವಾರ್ಷಿಕ ಹಲವಾರು ಲಕ್ಷ ಖರ್ಚು ಮಾಡುವ ಕರಾವಳಿಯಲ್ಲಿ ಬಸ್ ಕ್ಯಾರೇಜ್, ವಾಹನ ಡೀಲರ್ಸ್ ಶಿಪ್ ಹೊಂದಿರುವ ಸಂಸ್ಥೆಯೊಂದು ಕೂಡ ಹಳೆ ನೋಟುಗಳ ಮೂಲಕ ನೌಕರರಿಗೆ ವೇತನ ನೀಡುವ ಮೂಲಕ ತನ್ನ ನಕಲಿ ದೇಶ ಭಕ್ತಿಯನ್ನು ಬಹಿರಂಗಗೊಳಿಸಿದೆ. ಇಂತಹ ನೂರಾರು ಉದಾಹರಣೆಗಳು ಕರಾವಳಿಯಲ್ಲಿ ಜನರ ಚರ್ಚೆಗೆ ಗ್ರಾಸವಾಗಿದೆ.

ಮಂಗಳೂರಿನಲ್ಲಿ ಕೇಂದ್ರದ ಆಡಳಿತರೂಢ ಪಕ್ಷದ ವಕ್ತಾರರು ಮತ್ತು ಮುಖಂಡರಾಗಿರುವ ಬಹುತೇಕ ರಿಯಲ್ ಎಸ್ಟೇಟ್ ಕುಳಗಳು ಮತ್ತು ಬಿಲ್ಡರುಗಳು ಕಾರ್ಮಿಕರಿಗೆ ಹಳೆಯ ಸಾವಿರ ಮತ್ತು ಐನೂರು ರೂಪಾಯಿ ನೋಟಿನಲ್ಲಿ ವೇತನ ಪಾವತಿ ಮಾಡಿದ್ದಾರೆ. ಇದಕ್ಕೆ ಅವರು ನೀಡುವ ಕಾರಣ ಸಾಕಷ್ಟು ನೂರರ ನೋಟುಗಳು ಇಲ್ಲ ಎಂಬುದು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು ಉತ್ತರ ಕರ್ನಾಟಕ ಜಿಲ್ಲೆಯ ಬಾಗಲಕೋಟೆ, ವಿಜಾಪುರ, ಗದಗ, ಧಾರವಾಡ ಜಿಲ್ಲೆಗಳಿಂದ ಬಂದವರು ಅಥವಾ ಉತ್ತರ ಭಾರತದ ರಾಜ್ಯಗಳಿಂದ ಕೆಲಸಕ್ಕಾಗಿ ಇಲ್ಲಿಗೆ ಬಂದವರು. ಇಂತಹ ಕಾರ್ಮಿಕರ ದೌರ್ಬಲ್ಯವನ್ನು ದುರುಪಯೋಗಿಸಿಕೊಳ್ಳುವ ಹಣವಂತರು ಹಳೆ ನೋಟುಗಳನ್ನು ಸಾಗ ಹಾಕಿಸಿ ತಮ್ಮ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳುತ್ತಿರುವುದು ಕೇಂದ್ರ ಸರಕಾರದ ಗಮನಕ್ಕೆ ಬಂದಂತಿಲ್ಲ.