ರಾಯಣ್ಣ ಬ್ರಿಗೇಡ್ ಬೆಂಬಲಿಸಿದರೆ ಕ್ರಮ : ಬಿಜೆಪಿಗರಿಗೆ ಯಡ್ಡಿಯೂರಪ್ಪ ಎಚ್ಚರಿಕೆ

ಬೆಂಗಳೂರು : ಸಂಗೊಳ್ಳಿ ರಾಯಣ್ಣ ಬ್ರಿಗೇಡಿಗೆ ಬೆಂಬಲ ನೀಡುವ ಬಿಜೆಪಿ ಸದಸ್ಯರ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ರಾಜ್ಯ ಬಿಜಪಿ ಅಧ್ಯಕ್ಷ ಯಡ್ಡಿಯೂರಪ್ಪ ಮತ್ತೊಮ್ಮೆ ಗುಡುಗಿದ್ದಾರೆ. ಬ್ರಿಗೇಡ್ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಈಶ್ವರಪ್ಪ ಮತ್ತು ಯಡ್ಡಿಯೂರಪ್ಪ ಮಧ್ಯೆ ಕೆಲವು ಸಮಯದಿಂದ ಸಮರ ಮುಂದುವರಿದಿದೆ.

“ಬಿಜೆಪಿಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಬಂಧವಿಲ್ಲ. ಆದ್ದರಿಂದ ಪಕ್ಷದ ಯಾವುದೇ ಸದಸ್ಯ ಈ ಬ್ರಿಗೇಡಿಗೆ ಬೆಂಬಲ ವ್ಯಕ್ತಪಡಿಸಿದರೆ, ಅಂತಹವರ ವಿರುದ್ಧ ಅಗತ್ಯ ಕ್ರಮ ಜರುಗಿಸಲಾಗುವುದು. ಇದು ರಾಷ್ಟ್ರೀಯ ಮಟ್ಟದ ನಾಯಕರ ಆದೇಶವೂ ಆಗಿದೆ” ಎಂದು ಯಡ್ಡಿಯೂರಪ್ಪ ಸುದ್ದಿಗಾರರಲ್ಲಿ ಸ್ಪಷ್ಟಪಡಿಸಿದರು.

ನಂದಗಡದಲ್ಲಿ ಮಂಗಳ ವಾರದಂದು ಬ್ರಿಗೇಡ್ ಸಭೆ ನಡೆಯಲಿದ್ದು, ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಇದು ಎಚ್ಚರಿಕೆಯಾಗಿದೆ.

ಪಕ್ಷದಲ್ಲಿ ಒಬಿಸಿ ಮೋರ್ಚಾ ಇರುವುದರಿಂದ ಬಿಜೆಪಿ ಸದಸ್ಯರು ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಪ್ರತ್ಯೇಕವಾಗಿ ಕೆಲಸ ಮಾಡಬೇಕಾಗಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಹೇಳಿದ್ದಾರೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಹೊಸ ಅವತಾರವಾಗಿದೆ. ಸಮಿತಿಯು ಸುಮಾರು 10 ವರ್ಷಗಳ ಹಿಂದೆ ಈಶ್ವರಪ್ಪರಿಂದಲೇ ಆರಂಭಗೊಂಡಿತ್ತು. ಆಗ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದರು.

ಸೀಎಂ ಸಿದ್ದರಾಮಯ್ಯರ ಅಹಿಂದಕ್ಕೆ ಪರ್ಯಾಯವಾಗಿ ಈಶ್ವರಪ್ಪ ಮುಂಬರುವ ಚುನಾವಣೆಗಳಲ್ಲಿ ಸಂಗೊಳ್ಳಿ ರಾಯಣ್ಣ ಸಮಿತಿ ಬಲಿಷ್ಠ ಗೊಳಿಸಲಿಚ್ಚಿಸಿದ್ದರು. ಇದೊಂದು ಪಕ್ಷ ಒಡೆಯುವ ಕೆಲಸವೆಂಬ ಆರೋಪ ಕೇಳಿ ಬಂದಿರುವುದಲ್ಲದೆ, ಈಶ್ವರಪ್ಪರ ಕಟ್ಟಾ ವಿರೋಧಿ ಯಡ್ಡಿಯೂರಪ್ಪ ಇದಕ್ಕೆ ಬಲವಾಗಿ ಆಕ್ಷೇಪವೆತ್ತಿದ್ದಾರೆ.