ಮರಳು ಆಮದು ವಿರುದ್ಧ ಸರಕಾರಕ್ಕೆ ಯಡ್ಯೂರಪ್ಪ ಎಚ್ಚರಿಕೆ

 ಕಲಬುರ್ಗಿ : ಮಲೇಷ್ಯಾದಿಂದ ಮರಳು ಆಮದು ಮಾಡುವ ಬಗ್ಗೆ  ಯೋಚಿಸುತ್ತಿರುವ ರಾಜ್ಯ ಸರಕಾರವನ್ನು ಕಟುವಾಗಿ ಟೀಕಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಯೂರಪ್ಪ, ಇಂತಹ  ಕ್ರಮ ಭ್ರಷ್ಟಾಚಾರದ ಹೆಚ್ಚಳಕ್ಕೆ ಕಾರಣವಾಗಬಹುದು ಎಂದಿದ್ದಾರೆ.

ಪರಿವರ್ತನಾ ಯಾತ್ರೆಯ ಅಂಗವಾಗಿ ಕಲಬುರ್ಗಿ ಜಿಲ್ಲೆಯ ಅಫ್ಜಲಪುರದಲ್ಲಿ ರವಿವಾರ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಅವರು “ಮಲೇಷ್ಯಾದಿಂದ ಮರಳು ಆಮದು ಮಾಡಿ ನಂತರ ಅದನ್ನು ಪ್ರತಿ 50 ಕೆಜಿ ಚೀಲಕ್ಕೆ ರೂ 190ರಂತೆ ಪಡಿತರ ವಿತರಣಾ ವ್ಯವಸ್ಥೆಯ ಮುಖಾಂತರ ಮಾರಾಟ ಮಾಡುವ ಯೋಚನೆ ವಿಚಿತ್ರವಾಗಿದೆ. ಅಷ್ಟೇ ಮೊತ್ತಕ್ಕೆ 50 ಕೆಜಿ ಸಿಮೆಂಟ್ ದೊರೆಯುತ್ತದೆ. ಹಲವು  ಕಾಂಗ್ರೆಸ್ ಸಚಿವರು ಹಾಗೂ ಅವರ ಸಂಬಂಧಿಗಳು ಅಕ್ರಮ ಮರಳುಗಾರಿಕೆ ಉದ್ಯಮದಲ್ಲಿ ಭಾಗಿಯಾಗಿದ್ದಾರೆ. ಸರಕಾರ ತನ್ನ ಹೊಸ ಯೋಜನೆಯನ್ನೇದಾರೂ ಜಾರಿಗೊಳಿಸಿದರೆ ಅದರಿಂದ ಭ್ರಷ್ಟಾಚಾರ ಮಾತ್ರ ಇನ್ನಷ್ಟು ಹೆಚ್ಚಾಗಬಹುದು” ಎಂದು ಯಡ್ಯೂರಪ್ಪ ಎಚ್ಚರಿಸಿದ್ದಾರೆ.