ಸಿಂಹ ಅವಾಂತರಕಾರಿ ವರ್ತನೆಗೆ ಯಡ್ಯೂರಪ್ಪ ಅಸಮ್ಮತಿ

`ಶಾ ಸೂಚನೆಯನ್ನು ಪ್ರತಾಪ್ ಸಿಂಹ ತಪ್ಪಾಗಿ ಅರ್ಥೈಸಿದ್ದಾರೆ’

ಬೆಂಗಳೂರು : ಪೊಲೀಸ್ ಬ್ಯಾರಿಕೇಡ್ ಮೇಲೆಯೇ ಕಾರು ಚಲಾಯಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟು ನಂತರ ಬಿಡುಗಡೆಗೊಂಡ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಪಕ್ಷಾಧ್ಯಕ್ಷ ಅಮಿತ್ ಶಾ ತಮ್ಮ ನವೆಂಬರ್ ಭೇಟಿಯ ವೇಳೆ ನೀಡಿದ್ದ ಸೂಚನೆಯ ಬಗ್ಗೆ ಯುವ ಮೋರ್ಚಾ ಕಾರ್ಯಕರ್ತರಿಗೆ  ಹೇಳಿಕೊಳ್ಳುತ್ತಿರುವ ವೀಡಿಯೋವೊಂದು ವೈರಲ್ ಆದ ಬೆನ್ನಿಗೇ ಬಿಜೆಪಿ ಇಕ್ಕಟ್ಟಿನಲ್ಲಿ ಸಿಲುಕಿದೆ. ಕಾಂಗ್ರೆಸ್ ಹಾಗೂ ಜೆಡಿ(ಎಸ್) ಈ ವಿಚಾರದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರೆ,  ಬಿಜೆಪಿ ನಾಯಕತ್ವ ಕೂಡ ಸಿಂಹ ವರ್ತನೆಗೆ ತನ್ನ ಅಸಹನೆ ವ್ಯಕ್ತಪಡಿಸಿದೆ. “ಪ್ರತಾಪ್ ಸಿಂಹ ಅವರು ಶಾ ಅವರ ಸೂಚನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅವರು (ಶಾ) ಜನಸಾಮಾನ್ಯರನ್ನು ತೀವ್ರವಾಗಿ ಬಾಧಿಸುವ ಪ್ರಮುಖ ವಿಚಾರಗಳನ್ನು ಕೈಗೆತ್ತಿಕೊಂಡು ಪ್ರತಿಭಟನೆ ನಡೆಸಬೇಕು ಎಂದಷ್ಟೇ ಹೇಳಿದ್ದರು” ಎಂದು ಯಡ್ಯೂರಪ್ಪ   ಸ್ಪಷ್ಟೀಕರಣ ನೀಡಿದ್ದಾರೆ.

“ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಸಿಡಿಸುವಂತೆ ಮಾಡುವ ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕು ಎಂದು ಪಕ್ಷಾಧ್ಯಕ್ಷ ಅಮಿತ್ ಶಾ ತಮಗೆ ಸೂಚನೆ ನೀಡಿದ್ದಾರೆ” ಎಂದು ವೀಡಿಯೋದಲ್ಲಿ ಪ್ರತಾಪ್ ಸಿಂಹ ಅವರು ಹೇಳುತ್ತಿರುವುದು ಕೇಳಿಸುತ್ತದೆ. ಈ 37 ಸೆಕೆಂಡುಗಳ ವೀಡಿಯೋ ದೃಶ್ಯಾವಳಿಯಲ್ಲಿ ಪ್ರತಾಪ್ ಸಿಂಹ ಹೀಗೆ ಹೇಳುತ್ತಿದ್ದಾರೆ : “ಕಳೆದ ಕೆಲ ದಿನಗಳಲ್ಲಿ ಯುವ ಮೋರ್ಚಾ ಸದಸ್ಯರು ಎಷ್ಟು ಪ್ರತಿಭಟನೆಗಳನ್ನು ನಡೆಸಿದ್ದಾರೆಂದು ಶಾ ಕೇಳಿದ್ದಾರೆ. ಈ ಹಿಂದೆ ನಡೆದ ಪ್ರತಿಭಟನೆಗಳ ಸಂದರ್ಭ ಅಶ್ರುವಾಯು ಅಥವಾ ಲಾಠಿ ಪ್ರಯೋಗ ನಡೆದಿದೆಯೇ ಎಂದೂ ಅವರು ಕೇಳಿದ್ದರು. ನಾವು ಅಂತಹ ಪ್ರತಿಭಟನೆಗಳನ್ನು ನಡೆಸಿಲ್ಲ ಎಂದು ಹೇಳಿದಾಗ ಅವರು ಹಾಗೆ ಮಾಡಲು ಹೇಳಿದ್ದು ಭವಿಷ್ಯದಲ್ಲಿ ಈ ರೀತಿ ಪ್ರತಿಭಟಿಸುವುದಾಗಿ ನಾವು ಭರವಸೆ ನೀಡಿದೆವು” ಎಂದು ಸಿಂಹ ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ.