ಯಡ್ಡಿ, ಈಶುರಿಂದಲೇ ರಾಜ್ಯದಲ್ಲಿ ರಾಜಕೀಯ ವ್ಯಾಪಾರ : ಸೀಎಂ

ಶಿವಮೊಗ್ಗ : “ಬಿಜೆಪಿ ಮುಖಂಡರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ರಾಜ್ಯದಲ್ಲಿ ರಾಜಕೀಯದ ವ್ಯಾಪಾರ ಆರಂಭಿಸಿದ್ದರು. ಇಂತಹ ಸನ್ನಿವೇಶದಲ್ಲಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕ ಅಧಿಕಾರವಿದೆಯೇ ?” ಎಂದು ಸೀಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

“ಅಧಿಕಾರದ ಸಲುವಾಗಿ ಆಪರೇಶನ್ ಕಮಲದಡಿ ಅವರು 8 ಶಾಸಕರನ್ನು ಖರೀದಿಸಿದ್ದ ವೇಳೆ ಸಂಪೂರ್ಣ ಚುನಾವಣಾ ಪದ್ಧತಿಯೇ  ಭ್ರಷ್ಟಗೊಂಡಿತ್ತು. ಇಷ್ಟೆಲ್ಲ ಹುಳುಕು ಇಟ್ಟುಕೊಂಡಿರುವ ಅವರು ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ-ಚುನಾವಣೆ ಪ್ರಚಾರದ ವೇಳೆ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ” ಎಂದವರು ಸುದ್ದಿಗಾರರಲ್ಲಿ ಹೇಳಿದರು. “ರೈತರ ಸಾಲ ಮನ್ನಾ ಮಾಡುವಂತೆ ಅವರು ನಮ್ಮಲ್ಲಿ ಕೇಳುತ್ತಿದ್ದಾರೆ. ಕೇಂದ್ರವು ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಿ ನೋಡಲಿ. ಕೇಂದ್ರ ಸರ್ಕಾರದಿಂದ ಬೆಂಬಲ ಸಿಕ್ಕಿರುವುದರಿಂದ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಂತೆ ಉತ್ತರ ಪ್ರದೇಶ ಸರ್ಕಾರ ಕೃಷಿ ಸಾಲ ಮನ್ನಾ ಮಾಡಿದೆ. ಅದೇ ರೀತಿ ಬಿಜೆಪಿ ಇಲ್ಲೂ ಮಾಡಲಿ. ಆಗ ಮಾತ್ರ ನಮಗೆ ರೈತರ ಸಂಕಷ್ಟ ನಿವಾರಿಸಲು ಸಹಾಯ ಮಾಡಲಾಗುತ್ತದೆ” ಎಂದು ಸಿದ್ದರಾಮಯ್ಯ ವಿವರಿಸಿದರು.