ಯಡ್ಡಿ-ಅನಂತ್ ಸೀಡಿ ಪ್ರಕರಣ ತನಿಖೆ ಎಸಿಬಿಗೆ ?

ಬೆಂಗಳೂರು : ಬಿಜೆಪಿ ಹೈಕಮಾಡಿಗೆ ಕಪ್ಪಕಾಣಿಕೆ ನೀಡಿಕೆ ಕುರಿತಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಅವರ ನಡುವಿನ ಸಂಭಾಷಣೆಯಿದೆಯೆಂದು  ಹೇಳಲಾಗಿರುವ ಸೀಡಿ ಸುತ್ತ ಹರಡಿಕೊಂಡಿರುವ ವಿವಾದದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸುವ ಸಾಧ್ಯತೆಯಿದೆ.

ಸೀಡಿಯಲ್ಲಿರುವ ಧ್ವನಿಗಳು  ಯಡ್ಯೂರಪ್ಪ ಹಾಗೂ ಅನಂತ ಕುಮಾರ್ ಅವರ ಧ್ವನಿ ಮಾದರಿಗಳಿಗೆ ತಾಳೆಯಾಗುತ್ತವೆ ಎಂದು ಸೋಮವಾರ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಗೃಹ ಸಚಿವ ರಾಮಲಿಂಗಾ ರೆಡ್ಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ  ಟಿ ಸುನೀಲ್ ಕುಮಾರ್ ಹಾಗೂ ಗೃಹ ಸಚಿವರ

ಸಲಹೆಗಾರ ಕೆಂಪಯ್ಯ ಜತೆ ದೀರ್ಘ ಸಮಾಲೋಚನೆ ನಡೆಸಿದ್ದಾರೆ. ಯಡ್ಯೂರಪ್ಪ  ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ  ಕೇಂದ್ರ ನಾಯಕರುಗಳಿಗೆ ಹಣ ಸಂದಾಯ ಮಾಡಿರುವ ಬಗ್ಗೆ  ಮಾತುಕತೆಗಳು ಈ ಸೀಡಿಯಲ್ಲಿವೆಯೆನ್ನಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಪರಿಶೀಲಿಸುತ್ತಿದ್ದು ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರೆ ಮುಖ್ಯಮಂತ್ರಿ ಮಾತ್ರ ಪ್ರತಿಕ್ರಿಯಿಸಲು ನಿರಾಕರಿಸಿ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದಷ್ಟೇ ಹೇಳಿದರು.