ಯಡ್ಡಿಯೂರಪ್ಪ ಸುಳ್ಳು ಭರವಸೆ ನೀಡುವುದರಲ್ಲಿ ನಿಸ್ಸೀಮ : ಮಧು

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : “ಸುಳ್ಳು ಭರವಸೆ ನೀಡಿ ಮತಭಿಕ್ಷೆ ಬೇಡುವ ಯಡ್ಡಿಯೂರಪ್ಪ ಅವರು ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯನ್ನು ಮೀರಿಸುವ ಸುಳ್ಳಿನ ಸರದಾರ“ ಎಂದು ಜೆಡಿಎಸ್ ರಾಜ್ಯ ಮುಖಂಡ, ಸೊರಬ ಶಾಸಕ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

ತಾಲೂಕು ಜೆಡಿಎಸ್ ಘಟಕದ ವತಿಯಿಂದ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, “ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ರಾಜ್ಯಮಟ್ಟದಲ್ಲಿ ಭೀಕರ ಬರಗಾಲದ ಪರಿಸ್ಥಿತಿಯಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ರೈತರನ್ನು ನಿರ್ಲಕ್ಷಿಸಿದೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಶಿಕ್ಷೆ ನೀಡಲಿದ್ದಾರೆ. ಎರಡೂ ಪಕ್ಷಗಳು ಜನರ ವಿಶ್ವಾಸ ಕಳೆದುಕೊಳ್ಳುವುದು ನಿಶ್ಚಿತ. ಉಪಚುನಾವಣೆ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ ಅವರು ಮುಂದಿನ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಘೋಷಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲವನ್ನು ಮನ್ನಾ ಮಾಡಿ ಎಂದರೆ `ನಾನು ದುಡ್ಡು ಪ್ರಿಂಟ್ ಮಾಡುವ ಮಷಿನ್ ಇಟ್ಟಿದ್ದೇನೆಯೇ ಎಂದು ಕೇಳಿದ್ದರು. ಈಗ ರೈತರ ಸಾಲ ಮನ್ನಾ ಮಾಡಿ ಎಂದು ಕೂಗುತ್ತಿದ್ದಾರೆ. ಸುಳ್ಳು ಭರವಸೆ ನೀಡುವುದರಲ್ಲಿ ಅವರು ನಿಸ್ಸೀಮರು ಎಂದು ಹೇಳಿದರು.

ನೀವು ಕಾಂಗ್ರೆಸ್ಸಿಗೆ ಸೇರುತ್ತಿದ್ದಿರಿ ಎಂಬ ಮಾತು ಕೇಳಿ ಬರುತ್ತಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಇದನ್ನು ಅಲ್ಲಗಳೆದ ಅವರು “ಖಾಲಿ ಸ್ಥಾನವನ್ನು ತುಂಬುವ ನಾಯಕ ನಾನಲ್ಲ“ ಎಂದು ಸ್ಪಷ್ಟನೆ ನೀಡಿದರು.