ಕನಿಷ್ಠ ವೇತನ, ವಿವಿಧ ಸವಲತ್ತು ಆಗ್ರಹಿಸಿ ಬಿ ಎಸ್ ಎನ್ ಎಲ್ ಕಾರ್ಮಿಕರ ಧರಣಿ

ಬಿ ಎಸ್ ಎನ್ ಎಲ್ ಕಾರ್ಮಿಕರು ಸುದ್ದಿಗಾರರೊಂದಿಗೆ ಮಾತಾಡಿದರು

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಬಿ ಎಸ್ ಎನ್ ಎಲ್ ಸಂಸ್ಥೆಯ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಸಹಿತ ವಿವಿಧ ಸವಲತ್ತು ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಬಿ ಎಸ್ ಎನ್ ಎಲ್ ನಾನ್ ಪರ್ಮನೆಂಟ್ ವರ್ಕರ್ಸ್ ಫೆಡರೇಶನ್ ದ ಕ ಜಿಲ್ಲಾ ಸಮಿತಿ ವತಿಯಿಂದ ಜನವರಿ 12ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಫೆಡರೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ತಿಳಿಸಿದರು.

ಬಿ ಸಿ ರೋಡಿನಲ್ಲಿ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎರಡು ದಶಕಗಳಿಗೂ ಹೆಚ್ಚು ಕಾಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಸವಲತ್ತು ನೀಡುವಂತೆ ಆಗ್ರಹಿಸಿ ಈ ಧರಣಿ ನಡೆಯಲಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳ ಬಿ ಎಸ್ ಎನ್ ಎಲ್ ಗುತ್ತಿಗೆ ಕಾರ್ಮಿಕರು ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ” ಎಂದರು.

“ಧರಣಿಗೆ ಮುನ್ನ ಬಿ ಎಸ್ ಎನ್ ಎಲ್ ಸಂಸ್ಥೆಯ ಜನರಲ್ ಮ್ಯಾನೇಜರ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಬಳಿಕ ಅಲ್ಲಿಂದ ಮೆರವಣಿಗೆ ಮೂಲಕ ಕಾರ್ಮಿಕ ಆಯುಕ್ತರ ಕೇಂದ್ರ ಕಚೇರಿಗೆ ಆಗಮಿಸಿ ತಮ್ಮ ಬೇಡಿಕೆ ಈಡೇರುವ ತನಕ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು” ಎಂದ ಅವರು, “ಧರಣಿಯ ಸಂದರ್ಭ ಸಂಸ್ಥೆಯ ಕಚೇರಿಯಲ್ಲಿ ಹಾಗೂ ಬಿ ಎಸ್ ಎನ್ ಎಲ್ ಗ್ರಾಹಕರಿಗೆ ತೊಂದರೆಯಾದಲ್ಲಿ ಕಾರ್ಮಿಕರು ಜವಾಬ್ದಾರರಲ್ಲ” ಎಂದರು.

“2016ರ ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗಿನ ನಾಲ್ಕು ತಿಂಗಳಲ್ಲಿ ಪಿಎಫ್, ಇ ಎಸ್ ಐ ಸಹಿತ 10,008 ರೂ ವೇತನ ಲಭ್ಯವಾಗುತ್ತಿತ್ತು. ತದನಂತರದ ತಿಂಗಳಿನಿಂದ ಪಿಎಫ್, ಇ ಎಸ್ ಐ ಸೇರಿದಂತೆ 6,396 ರೂ ಮಾತ್ರ ವೇತನ ನೀಡಲಾಗುತ್ತಿದೆ. ತಮ್ಮ ಹಿಂದಿನ ವೇತನದಿಂದ ಇದನ್ನು ಕಡಿತಗೊಳಿಸಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ” ಎಂದ ಹನೀಫ್ ಕಾನೂನು ಬದ್ಧವಾಗಿ ಕನಿಷ್ಠ ವೇತನ ಸಹಿತ ಎಲ್ಲ ಸೌಲಭ್ಯಗಳು ಕೂಡಾ ಸಿಗಬೇಕು ಎಂದು ಒತ್ತಾಯಿಸಿದರು.