ಮದುವೆಯಾದ ನಂತರ ಅಣ್ಣ ಬದಲಾಗಿದ್ದಾನೆಚೇತನ

ಪ್ರ : ನನಗೀಗ 24 ವರ್ಷ. ಅಣ್ಣ ನನಗಿಂತ ನಾಲ್ಕು ವರ್ಷ ದೊಡ್ಡವನು. ನನಗೆ ಮದುವೆಗೆ ಗಂಡು ನೋಡಲು ಮೊದಲು ಶರುಮಾಡಿದರೂ ಸರಿಯಾಗಿ ಸೆಟ್ ಆಗದ ಕಾರಣ ಅಣ್ಣನೇ ಮೊದಲು ಮದುವೆಯಾಗುವಂತಾಯಿತು. ಅಣ್ಣ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸದಲ್ಲಿ ಇದ್ದಾನೆ. ಅವನು ನೋಡಲೂ ಎತ್ತರವಾಗಿ ಸುಂದರವಾಗಿದ್ದಾನೆ. ಶ್ರೀಮಂತ ಕುಟುಂಬದವರು ಅವರೇ ಮುಂದೆ ಬಂದು ಅಣ್ಣನಿಗೆ ಹುಡುಗಿ ಕೊಡಲು ಉತ್ಸುಕತೆ ತೋರಿದಾಗ ಅಮ್ಮನೂ ಮದುವೆಗೆ ಒಪ್ಪಿಗೆ ಇತ್ತಳು. ಅತ್ತಿಗೆಯ ಜೊತೆಗೆ ಅಣ್ಣನಿಗೆ ಕಾರು, ಲಕ್ಷಗಟ್ಟಲೆ ಹಣ ಸಹ ಸಿಕ್ಕಿತು. ಅವರೀಗ ಬೆಂಗಳೂರಿನಲ್ಲಿ ಮನೆ ತೆಗೆದುಕೊಂಡು ಹಾಯಾಗಿದ್ದಾರೆ. ಆದರೆ ನಾವು ಮಾತ್ರ ಇಲ್ಲಿ ಬವಣೆ ಪಡುತ್ತಿದ್ದೇವೆ. ನಾನೊಂದು ಪ್ರೈವೇಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ತಮ್ಮ ಬಿಕಾಂ ಫೈನಲ್ ಇಯರ್. ತಂಗಿ ಪಿಯುಸಿ ಓದುತ್ತಿದ್ದಾಳೆ. ಎರಡು ವರ್ಷದ ಹಿಂದೆ ಅಪ್ಪ ತೀರಿಹೋದರು. ನಮ್ಮ ಹತ್ತಿರ ಈಗ ಇರುವುದು ಹಳೆಯ ಚಿಕ್ಕ ಮನೆ ಮಾತ್ರ. ಅಣ್ಣ ತನ್ನ ಮದುವೆಯಾಗುವವರೆಗೆ ಹಣ ಕಳಿಸುತ್ತಿದ್ದ. ಈಗ ನಾವು ಅನೇಕ ಸಲ ಫೋನ್ ಮಾಡಿದ ನಂತರ ಅಪರೂಪಕ್ಕೊಮ್ಮೆ ಪುಡಿಗಾಸು ಕಳಿಸುತ್ತಾನೆ. ಕೇಳಿದರೆ ಮದುವೆಯಾದ ನಂತರ ತನ್ನ ಸಂಸಾರದ ಖರ್ಚೇ ಜಾಸ್ತಿಯಾಗಿದೆ ಅಂತಾನೆ. ಮೊದಲೆಲ್ಲ ತಿಂಗಳಿಗೊಮ್ಮೆ ಬರುತ್ತಿದ್ದವನು ಈಗ ಮೂರು ತಿಂಗಳ ಹಿಂದೆ ನಡೆದ ಅಪ್ಪನ ತಿಥಿಗೆ ಮಾತ್ರ ಬಂದಿದ್ದ. ಅತ್ತಿಗೆಯಂತೂ ಬಂದವಳು ಒಂದೆರಡು ತಾಸು ಮಾತ್ರ ನಮ್ಮ ಮನೆಯಲ್ಲಿದ್ದು ತನ್ನ ತವರಿಗೆ ಹೋದಳು. ಅವಳು ನಮ್ಮ ಜೊತೆ ಮಾತೂ ಆಡುವುದಿಲ್ಲ.  ಅವಳ ಐಷಾರಾಮೀ ಜೀವನಕ್ಕೆ ಅಣ್ಣನೂ ಮಾರುಹೋಗಿ ನಮ್ಮನ್ನೆಲ್ಲ ಮರೆತುಬಿಟ್ಟಿದ್ದಾನೆ. ಈಗ ನನಗೆ ಮದುವೆ ಮಾಡುವ ಬಗ್ಗೆಯೂ ಅವನು ಯೋಚಿಸುತ್ತಿಲ್ಲ. ತಮ್ಮ, ತಂಗಿಯರ ವಿದ್ಯಾಭ್ಯಾಸಕ್ಕೆ ಹಣ ನಾನೇ ಕೊಡುತ್ತಿದ್ದೇನೆ. ಅಣ್ಣನ ಈ ಬದಲಾದ ನಡೆವಳಿಕೆ ಬಗ್ಗೆ ಅಮ್ಮ ಕಣ್ಣೀರು ಹಾಕುತ್ತಿದ್ದಾಳೆ. ನಮ್ಮೆಲ್ಲರ ಮುಂದಿನ ಜೀವನ ಹೇಗೋ ಏನೋ ಅನ್ನುವಂತಾಗಿದೆ. ಅಣ್ಣನಿಗೆ ಬುದ್ದಿ ಹೇಳುವರ್ಯಾರು?

: ಹೆಂಡತಿ ಬಂದ ತಕ್ಷಣ ಹೀಗೆ ವಿಧವೆ ಅಮ್ಮ, ಒಡಹುಟ್ಟಿದವರನ್ನೆಲ್ಲ ಮರೆಯಲು ಮನಸ್ಸಾದರೂ ಹೇಗೆ ಬರುತ್ತದೋ. ತುತ್ತು ಕೊಟ್ಟು ಬೆಳೆಸಿದ ಅಮ್ಮನ ಕಣ್ಣೀರಿನ ಬಿಸಿ ಅವನ ಹೃದಯಕ್ಕೆ ತಟ್ಟುವುದೇ ಇಲ್ಲ ಅಂದರೆ ಅವನಿಗೆ ಹೃದಯವೇ ಇಲ್ಲ ಅಂತಲೇ ಅನ್ನಬೇಕು. ಬೆಡಗಿನ ಭಿನ್ನಾಣಗಿತ್ತಿಯ ಮುತ್ತಿನ ಮತ್ತಿಗೆ ಅವನು ನಿಮ್ಮನ್ನೆಲ್ಲ ಮರೆತುಬಿಟ್ಟಿದ್ದಾನೆ. ಒಂದಲ್ಲ ಒಂದು ದಿನ ತನ್ನ ತಪ್ಪಿನ ಅರಿವಾಗಬಹುದು ಅವನಿಗೆ.  ಆದರೆ ಆ ದಿನಕ್ಕಾಗಿ ನೀವು ಕಾಯುತ್ತಾ ಕೂರಲು ಸಾಧ್ಯವಿಲ್ಲವಲ್ಲ — ಜೀವನ ಚಕ್ರ ನಡೆಯಲೇ ಬೇಕು. ಈಗ ನೀವು ಮೊದಲು ಅಣ್ಣನ ಈ ನಡೆವಳಿಕೆಯನ್ನು ಬದಲಾಯಿಸಲು ಸಾಧ್ಯಾನಾ ಅಂತ ನೋಡಿ. ಸ್ವಲ್ಪ ನಿಷ್ಠುರವಾದರೂ `ನೀನು ಮಾಡುತ್ತಿರುವುದು ಸರಿಯಲ್ಲ’ ಅಂತ ನೇರವಾಗಿಯೇ ಒಮ್ಮೆ ಹೇಳಿ. ನಿಮ್ಮ ಹಿರಿಯ ನೆಂಟರಿಂದಲೂ ಅವನಿಗೆ ಬುದ್ಧಿ ಹೇಳಿಸಿ. ಆದರೆ ಹೆಂಡತಿಯ ಮೋಹದಲ್ಲಿ ಮೈಮರೆತ ಅವನಿಗೆ ಈಗ ಯಾರ ಮಾತೂ ಕಿವಿಯ ಮೇಲೆ ಬೀಳುವುದು ಕಷ್ಟವೇ. ಹಾಗಾದರೆ ನೀವೀಗ ಮನೆಯ ಜವಾಬ್ದಾರಿ ಹೊರಲೇ ಬೇಕಾಗುತ್ತದೆ. ತಮ್ಮನ ವಿದ್ಯಾಭ್ಯಾಸ ಮುಗಿದು ಅವನು ಸಂಪಾದಿಸುವವರೆಗೆ ಮದುವೆಯನ್ನು ನೀವು ಮುಂದೂಡುವುದೇ ಒಳ್ಳೆಯದು. ಒಂದು ವೇಳೆ ಅಣ್ಣನೇ ಇರದಿದ್ದರೆ ಹೇಗೆ ನೀವು ಗಂಡು ಮಗನಂತೆ ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದೀರೋ ಹಾಗೇ ಈಗಲೂ ಅಣ್ಣ ನಿಮ್ಮ ಪಾಲಿಗೆ ಇಲ್ಲ ಅಂತಂದುಕೊಳ್ಳಿ. ಸ್ವಲ್ಪ ಕಷ್ಟವೆನಿಸಿದರೂ ಅಮ್ಮ, ತಂಗಿ-ತಮ್ಮನನ್ನು ನೋಡಿಕೊಳ್ಳುತ್ತಿರುವ ಆತ್ಮತೃಪ್ತಿ ನಿಮ್ಮದಾಗಲಿ. ಕಷ್ಟದಲ್ಲಿ ಸಂಸಾರ ನಡೆಸಿದ ಈ ಅನುಭವ ನಿಮ್ಮ ಜೀವನದುದ್ದಕ್ಕೂ ಸಹಾಯವಾಗಬಲ್ಲುದು. ನಿಮ್ಮ ಕರ್ತವ್ಯಪರತೆಯನ್ನು ಮೆಚ್ಚಿ ನಿಮಗೆ ಸರಿಯಾದ ವರನೂ ಸಿಗಬಹುದು. ಆಗಾದರೂ ಅಣ್ಣನಿಗೆ ತಾನು ಕರ್ತವ್ಯ ಮರೆತ ಬಗ್ಗೆ ನಾಚಿಕೆಯಾಗಬಹುದು.